ಕೇರಳ: ಬ್ಲೇಡ್ನಿಂದ ಕತ್ತು ಸೀಳಿ ತಾಯಿ, ಮಗನ ಭೀಕರ ಹ*ತ್ಯೆ!

ತ್ರಿಶೂರ್ (ಕೇರಳ): ತ್ರಿಶೂರ್ನ ವಲಪ್ಪಾಡ್ ಬೀಚ್ ಸಮೀಪದ ನಿವಾಸವೊಂದರಲ್ಲಿ ಗುರುವಾರ ಬೆಳಗಿನ ಜಾವ ಘೋರ ದುರಂತವೊಂದು ಸಂಭವಿಸಿದ್ದು, 24 ವರ್ಷದ ತಾಯಿ ಹಾಗೂ ಆಕೆಯ ನಾಲ್ಕೂವರೆ ವರ್ಷದ ಮಗನನ್ನು ಬ್ಲೇಡ್ನಿಂದ ಅತ್ಯಂತ ಭೀಕರವಾಗಿ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ ವಿಜೇಶ್ (44) ಸ್ಥಿತಿ ತೀವ್ರ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.ಕೊಲೆಯಾದವರನ್ನು ವಿಸ್ಮಯ (24) ಹಾಗೂ ಆಕೆಯ 4.5 ವರ್ಷದ ಪುತ್ರ ದಕ್ಷಿಣ್ ಎಂದು ಗುರುತಿಸಲಾಗಿದೆ. ಈ ದಾರುಣ ಘಟನೆ ಇಡೀ ಕೇರಳ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿದೆ. ತ್ರಿಶೂರ್ನಲ್ಲಿ ಲಾರಿ ಚಾಲಕರಾಗಿರುವ ವಿಜೇಶ್, ನಾಟಿಕಾ ಬೀಚ್ ಮೂಲದವರಾಗಿದ್ದು, ವಾರಕ್ಕೆ ಒಂದು ಅಥವಾ ಎರಡು ಬಾರಿ ವಿಸ್ಮಯ ಅವರ ತಾಯಿ ಮನೆಗೆ ಬಂದು ಹೋಗುತ್ತಿದ್ದರು. ಎಂದಿನಂತೆ ಬುಧವಾರ ರಾತ್ರಿಯೂ ಮನೆಗೆ ಬಂದಿದ್ದ ವಿಜೇಶ್, ಪತ್ನಿ ಹಾಗೂ ಮಗುವಿನೊಂದಿಗೆ ಕೋಣೆಯಲ್ಲಿ ಮಲಗಿದ್ದನು. ಪಕ್ಕದ ಕೋಣೆಯಲ್ಲಿ ವಿಸ್ಮಯಳ ತಾಯಿ ಮತ್ತು ಸಹೋದರ ಮಲಗಿದ್ದರು.

ಬೆಳಗಿನ ಜಾವ 1:30 ರ ಸುಮಾರಿಗೆ ಕೋಣೆಯಿಂದ ವಿಸ್ಮಯಳ ಕಿರುಚಾಟ ಕೇಳಿಬಂದಿದೆ. ತಕ್ಷಣ ಎಚ್ಚೆತ್ತ ಸಹೋದರ ಕೋಣೆಯ ಬಾಗಿಲು ತಳ್ಳುತ್ತಿದ್ದಂತೆಯೇ, ಕುತ್ತಿಗೆಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗುತ್ತಿದ್ದ ಸ್ಥಿತಿಯಲ್ಲಿದ್ದ ವಿಸ್ಮಯ ಮನೆಯಿಂದ ಹೊರಗೆ ಓಡಿದ್ದಾರೆ. ಜೀವ ಉಳಿಸಿಕೊಳ್ಳಲು ರಸ್ತೆಯುದ್ದಕ್ಕೂ ಸುಮಾರು 200 ಮೀಟರ್ಗೂ ಹೆಚ್ಚು ದೂರ ಓಡಿದ ವಿಸ್ಮಯ ಅವರನ್ನು ರಕ್ಷಿಸಲು ತಾಯಿ ಮತ್ತು ಸಹೋದರ ಹಿಂಬಾಲಿಸಿದ್ದಾರೆ. ರಸ್ತೆಯುದ್ದಕ್ಕೂ ಭಾರಿ ಪ್ರಮಾಣದ ರಕ್ತ ಚೆಲ್ಲಿತ್ತು.
ವಿಸ್ಮಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಪರದಾಡುತ್ತಿದ್ದ ವೇಳೆ, ಕೋಣೆಯಲ್ಲಿದ್ದ ನಾಲ್ಕೂವರೆ ವರ್ಷದ ಮಗು ದಕ್ಷಿಣ್ ಕತ್ತನ್ನೂ ವಿಜೇಶ್ ಬ್ಲೇಡ್ನಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಮೂವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವಿಸ್ಮಯ ಹಾಗೂ ಮಗು ದಕ್ಷಿಣ್ ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆರೋಪಿ ವಿಜೇಶ್ಗೆ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರ ಪ್ರಕಾರ ದಂಪತಿಗಳ ನಡುವೆ ಸಣ್ಣಪುಟ್ಟ ಜಗಳಗಳಿದ್ದರೂ ಈ ಮಟ್ಟದ ಭೀಕರ ಕೃತ್ಯ ಎಸಗುವಂತಹ ಯಾವುದೇ ದೊಡ್ಡ ಭಿನ್ನಾಭಿಪ್ರಾಯಗಳಿರಲಿಲ್ಲ. ಶೇವ್ ಮಾಡುವ ಬ್ಲೇಡ್ನಿಂದಲೇ ಈ ಭೀಕರ ಹತ್ಯೆಗಳನ್ನು ಎಸಗಲಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೌಟುಂಬಿಕ ಕಲಹವೇ ಈ ಕೊಲೆಗೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ. ಕೊಡಂಗಲ್ಲೂರು ಡಿವೈಎಸ್ಪಿ (DySP) ನೇತೃತ್ವದಲ್ಲಿ ಪ್ರಕರಣದ ಸಮಗ್ರ ತನಿಖೆ ಮುಂದುವರಿದಿದೆ.