ಅಮೆರಿಕದಲ್ಲಿ ಪತ್ನಿಯ ಕೊ*ಲೆ ಮಾಡಿದ ಟೆಕ್ಕಿ: 48 ಕೋಟಿ ಜಾಮೀನು, ಜೀವಾವಧಿಯ ಭೀತಿಯಲ್ಲಿ ಆರೋಪಿ!

ವಾಷಿಂಗ್ಟನ್ ಡಿಸಿ: ಅಮೆರಿಕದ ವಾಷಿಂಗ್ಟನ್ನಲ್ಲಿ ವಾಸ ಮಾಡುತ್ತಿದ್ದ 30 ವರ್ಷದ ಟೆಕ್ಕಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ (Telangana techie charged with wife’s murder in US)ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆತನನ್ನು ಬೆಲ್ಲೆವ್ಯೂ ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.

ತೆಲಂಗಾಣ ಮೂಲದ ಸಾಫ್ಟ್‌ವೇರ್ ಡೆವಲಪರ್ ಅವಿನಾಶ್ ನಾರ್ನೆ ಬಂಧಿತ ಆರೋಪಿ. ಈತ ತನ್ನ 27 ವರ್ಷದ ಪತ್ನಿ ರಂಜಿತಾ ಸಬ್ಬಿನೇನಿ ಎಂಬುವವರನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದು ಈತನಿಗೆ ಕೋರ್ಟ್ ಸದ್ಯ 5 ಮಿಲಿಯನ್ ಯುಎಸ್‌ಡಿ (ಸುಮಾರು 48 ಕೋಟಿ ರೂಪಾಯಿ) ಭಾರಿ ಮೊತ್ತದ ಜಾಮೀನು ವಿಧಿಸಿದ್ದು, ಆತ ಕಸ್ಟಡಿಯಲ್ಲಿದ್ದಾನೆ. 9 ತಿಂಗಳ ಹಿಂದೆ ನಡೆದಿದ್ದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಸಹಜ ಸಾವು ಎಂದು ಕತೆ ಕಟ್ಟಿದ್ದ
ಅವಿನಾಶ್ ನರಾಣೆ ಹಾಗೂ ರಂಜಿತಾ ಸಬ್ಬಿನೇನಿ ಮದುವೆಯಾಗಿ ಆರು ತಿಂಗಳೂ ಕಳೆದಿರಲಿಲ್ಲ. ಈಗೊಮ್ಮೆ 2025 ಅಕ್ಟೋಬರ್ನಲ್ಲಿ ಆರೋಪಿ ಅವಿನಾಶ್ ನಾರ್ನೆ ಪೊಲೀಸರಿಗೆ ಕರೆ ಮಾಡಿ ನನ್ನ ಪತ್ನಿ ಬಾತ್ರೂಮ್ನಲ್ಲಿ ಲಾಕ್ ಮಾಡಿಕೊಂಡಿದ್ದು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕತೆ ಕಟ್ಟಿದ್ದನು. . ಪೊಲೀಸರು ಸ್ಥಳಕ್ಕೆ ಧಾವಿಸಿ ಬಾತ್‌ರೂಮ್ ಬಾಗಿಲು ಮುರಿದು ಒಳಹೊಕ್ಕಾಗ ರಂಜಿತಾ ಸಬ್ಬಿನೇನಿ ನೆಲದ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿತ್ತು. ಮೊದಲು ಇದೊಂದು ಸಹಜ ಸಾವು ಎಂದು ಆತ ಬಿಂಬಿಸಿದ್ದ. ಆದರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿ ವರದಿ ಸಿಕ್ಕ ನಂತರವಷ್ಟೇ ಇದೊಂದು ಉದ್ದೇಶಪೂರ್ವಿತ ಕೊಲೆ ಎಂದು ಬೆಳಕಿಗೆ ಬಂದಿದೆ.
ಸ್ಮಾರ್ಟ್ ಲಾಕ್ನಿಂದ ಕೊಲೆ ಬಯಲು
ಪೊಲೀಸರಿಗೆ ತನ್ನ ಮೇಲೆ ಯಾವುದೇ ಅನುಮಾನ ಬಾರದಂತೆ ತಡೆಯಲು ಅವಿನಾಶ್ ಪೊಲೀಸರಿಗೆ ಕಟ್ಟುಕತೆಯನ್ನು ಹೇಳಿದ್ದ. 40 ನಿಮಿಷಗಳ ಕಾಲ ಹೊರಗಡೆ ಇದ್ದೆ. ಆಗ ಪತ್ನಿ ಬಾತ್ರೂಂ ಲಾಕ್ ಮಾಡಿಕೊಂಡಿದ್ದಳು ಎಂದು ಹೇಳಿದ್ದ.
ಪೊಲೀಸರು ಅಪಾರ್ಟ್ಮೆಂಟನ್ ಸೆಕ್ಯೂರಿಟಿ ಮತ್ತು ಸ್ಮಾರ್ಟ್-ಲಾಕ್ ಸಿಸ್ಟಮ್‌ನ ಡಿಜಿಟಲ್ ಡೇಟಾ ಗಮನಿಸಿದಾಗ ಆತ ಹೊರಗಡೆ ಇದ್ದಿದ್ದು ನಿಜ ಆದರೆ, ಅಪಾರ್ಟ್ಮೆಂಟ್ ಒಳಗೆ ಯಾವುದೇ ಅಪರಿಚಿತ ವ್ಯಕ್ತಿ ಬಂದಿಲ್ಲ ಎನ್ನುವುದು ಕನ್ಫರ್ಮ್ ಆಗಿತ್ತು. ಬೇರೆ ಯಾರೋ ಬಂದು ಆಕೆಯನ್ನು ಕೊಲೆ ಮಾಡಿಲ್ಲ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿತ್ತು.
ಪ್ರೇಯಸಿಗೆ ಪತ್ನಿಯ ಮೃತದೇಹ ಫೋಟೋ ರವಾನೆ
ಮದುವೆಗೆ ಮುಂಚಿನಿಂದಲೂ ಅವಿನಾಶ್‌ಗೆ ಭಾರತದಲ್ಲಿದ್ದ ಮತ್ತೊಬ್ಬ ಮಹಿಳೆಯೊಂದಿಗೆ ರಹಸ್ಯ ಪ್ರೇಮ ಸಂಬಂಧವಿತ್ತು ಎನ್ನುವುದು ಪೊಲೀಸರಿಗೆ ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ತಿಳಿದುಬಂತು. ವಿಶೇಷವೆಂದರೆ ಆ ಮಹಿಳೆ ಇವರ ಮದುವೆಗೂ ಬಂದಿದ್ದಳು. ಮದುವೆಯ ನಂತರವೂ ಅವಿನಾಶ್ ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು.ಪತ್ನಿ ಸತ್ತ ದಿನದಂದೇ ಅವಿನಾಶ್ ಆಕೆಗೆ 4 ಬಾರಿ ಕರೆ ಮಾಡಿದ್ದನು. ಇಷ್ಟೇ ಅಲ್ಲದೆ, ಪತ್ನಿ ಸತ್ತ ಮರುದಿನವೇ ಆಕೆಯ ಮೃತದೇಹದ ಫೋಟೋವನ್ನು ಭಾರತದಲ್ಲಿದ್ದ ಪ್ರೇಯಸಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದ ಎನ್ನಲಾಗಿದೆ.
ಸ್ಮೂಥಿ ಕೆಮ್ಮಿನ ಸಿರಪ್‌ನಂತಿದೆ ಎಂದಿದ್ದ ಪತ್ನಿ
ಕೊಲೆಗೂ ಮುನ್ನವೇ ಪತ್ನಿಗೆ ವಿಷವುಣಿಸಲು ಯತ್ನಿಸಲಾಗಿತ್ತೇ ಎಂಬ ಸಂಶಯ ಮೂಡುವಂತಹ ಸಂದೇಶಗಳು ಇವರಿಬ್ಬರ ಚಾಟ್‌ಗಳಲ್ಲಿ ಪತ್ತೆಯಾಗಿವೆ. ಮದುವೆಯಾದ ಕೆಲವೇ ವಾರಗಳಲ್ಲಿ ರಂಜಿತಾ, ತನ್ನ ಪತಿ ಮಾಡಿಕೊಡುವ ಪಾನೀಯಗಳು ಅಸಾಮಾನ್ಯವಾಗಿ ಕಹಿಯಾಗಿರುತ್ತಿವೆ ಎಂದು ದೂರುತ್ತಿದ್ದರು. ತಾನು ಸಾಯುವ ದಿನದಂದು ಕೂಡ ಅವಿನಾಶ್ ಮಾಡಿಕೊಟ್ಟಿದ್ದ ‘ಸ್ಮೂಥಿ’ ತನಗೆ ಕಾಫ್ ಸಿರಪ್ನಂತೆ ರುಚಿಸುತ್ತಿದೆ ಎಂದು ರಂಜಿತಾ ಸಂದೇಶ ಕಳುಹಿಸಿದ್ದರು. ಪೊಲೀಸರು ಮನೆಗೆ ಬಂದಾಗಲೂ ಅವಿನಾಶ್, “ಆಕೆಗೆ ಹುಷಾರಿರಲಿಲ್ಲ, ಕೆಮ್ಮಿನ ಸಿರಪ್ ಕುಡಿದು ಬಿದ್ದಿರಬಹುದು” ಎಂದು ಪೊಲೀಸರ ಮುಂದೆ ವಾದಿಸಿದ್ದನು
ಜೀವಾವಧಿ ಶಿಕ್ಷೆಯ ಭೀತಿಕಳೆದ 8-9 ತಿಂಗಳುಗಳಿಂದ ಡಿಜಿಟಲ್ ಪುರಾವೆ ಹಾಗೂ ತನಿಖೆ ನಡೆಸುತ್ತಿದ್ದ ಬೆಲ್ಲೆವ್ಯೂ ಪೊಲೀಸರು ಜುಲೈ 1 ರಂದು ಅವಿನಾಶ್ ನಾರ್ನೆಯನ್ನು ಅಧಿಕೃತವಾಗಿ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇದು ಸಂಪೂರ್ಣ ಪೂರ್ವಯೋಜಿತ ಕೃತ್ಯ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದಾರೆ. ವಾಷಿಂಗ್ಟನ್ ರಾಜ್ಯದ ಕಾನೂನಿನ ಪ್ರಕಾರ ಅಪರಾಧ ಸಾಬೀತಾದರೆ ಈ ಭಾರತೀಯ ಟೆಕ್ಕಿಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ