ಪುತ್ತೂರು: ಚಾಕು ತೋರಿಸಿ ಕಿರುಕುಳ ಆರೋಪ; ಯುವತಿಯ ದೂರು, ಯುವಕರ ಪ್ರತಿಯಾದ ದೂರು – ಸಿಸಿಟಿವಿ ವೈರಲ್!

ಪುತ್ತೂರು: ಪುತ್ತೂರು ತಾಲೂಕಿನ ಪುರುಷರಕಟ್ಟೆ ಜಂಕ್ಷನ್ ಬಳಿ ಯುವತಿಯೊಬ್ಬಳಿಗೆ ಅನ್ಯಕೋಮಿನ ಯುವಕರು ಚಾಕು ತೋರಿಸಿ ಬೆದರಿಕೆ ಹಾಗೂ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಪುತ್ತೂರು ಪೊಲೀಸರು ಪರ-ವಿರೋಧದ ಎರಡು ಪ್ರತ್ಯೇಕ ಎಫ್ಐಆರ್ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುರುಷರಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. “ನಾನು ಪುರುಷರಕಟ್ಟೆ ಬಳಿ ಸ್ಕೂಟಿ ನಿಲ್ಲಿಸಿ ಬಸ್ ಹತ್ತಲು ತೆರಳುತ್ತಿದ್ದಾಗ, ನನಗೆ ಮುಂಚೆಯೇ ಪರಿಚಯವಿದ್ದ ಸುಹೈಲ್ ಹಾಗೂ ಆತನ ಜೊತೆಯಲ್ಲಿದ್ದ ಇನ್ನು ಮೂವರು ಯುವಕರು ದಾರಿ ಅಡ್ಡಗಟ್ಟಿದ್ದಾರೆ. ಅಲ್ಲದೆ ಮಾರಕಾಸ್ತ್ರ (ಚಾಕು) ತೋರಿಸಿ ಕಿರುಕುಳ ನೀಡಿದ್ದಾರೆ” ಎಂದು ಯುವತಿ ಆರೋಪಿಸಿದ್ದಾರೆ. ಯುವತಿಯ ದೂರಿನ ಬೆನ್ನಲ್ಲೇ ಪುತ್ತೂರು ಮಹಿಳಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 78(1) (ಮಹಿಳೆಯ ಘನತೆಗೆ ಧಕ್ಕೆ/ಕಿರುಕುಳ) ಹಾಗೂ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಪೊಲೀಸರು ತಕ್ಷಣವೇ ದೂರಿನಲ್ಲಿದ್ದ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಬೇರೆಯದೇ ಆದ ಆಯಾಮ ಸಿಕ್ಕಿದೆ. ಯುವಕರ ಹೇಳಿಕೆಯ ಪ್ರಕಾರ, “ತಾವು ಯಾವುದೇ ಅಪರಾಧಿಕ ಕೃತ್ಯ ಎಸಗಿಲ್ಲ. ಸ್ಥಳೀಯ ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ, ಅದಕ್ಕೆ ಚೀಸ್ ಹಾಕಲು ಬೇಕರಿ ಮಾಲೀಕರಿಂದ ಚಾಕು ಪಡೆದುಕೊಂಡಿದ್ದೆವು. ಚೀಸ್ ಕಟ್ ಮಾಡಿದ ನಂತರ ಆ ಚಾಕುವನ್ನು ವಾಪಸ್ ಬೇಕರಿಗೆ ನೀಡಲು ಹೋಗುತ್ತಿದ್ದಾಗ ಅಲ್ಲಿ ಯುವತಿ ಎದುರಾಗಿದ್ದಾಳೆ. ಆದರೆ, ಸ್ಥಳೀಯ ಹಿಂದೂ ಸಂಘಟನೆಯ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಹಾಗೂ ಇತರರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ, ದುರುದ್ದೇಶಪೂರ್ವಕವಾಗಿ ಯುವತಿಯನ್ನು ಮುಂದೆ ಬಿಟ್ಟು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ” ಎಂದು ಪ್ರತಿಯಾಗಿ ದೂರು ನೀಡಿದ್ದಾರೆ.
ಯುವಕರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲೂ ಮತ್ತೊಂದು ಪ್ರಕರಣ ದಾಖಲಾಗಿದೆ. ಸದ್ಯ ಪುರುಷರಕಟ್ಟೆ ಜಂಕ್ಷನ್ ಮತ್ತು ಬೇಕರಿ ಆಸುಪಾಸಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಯುವತಿ ಹೇಳಿದಂತೆ ಚಾಕು ತೋರಿಸಿ ಬೆದರಿಕೆ ಹಾಕಲಾಗಿದೆಯೇ ಅಥವಾ ಯುವಕರು ಹೇಳುತ್ತಿರುವ ಚೀಸ್ ಕತ್ತರಿಸುವ ಚಾಕುವಿನ ಕಥೆ ನಿಜವೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.