ರಾಂಚಿ: ಆರ್‌ಎಸ್‌ಎಸ್ ಕಚೇರಿ ಮೇಲೆ ಮುಂಜಾನೆ ಪೆಟ್ರೋಲ್ ಬಾಂಬ್ ದಾಳಿ ಯತ್ನ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

ರಾಂಚಿ: ರಾಂಚಿಯಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಹಾನಿ ಮಾಡುವ ಉದ್ದೇಶದಿಂದ ಬುಧವಾರ ಬೆಳಗಿನ ಜಾವ ಇಬ್ಬರು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲು ಪ್ರಯತ್ನಿಸಿದ್ದಾರೆ.

ಪೊಲೀಸರ ಪ್ರಕಾರ, ಇಂದು ಬೆಳಗಿನ ಜಾವ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ತುಂಬಿದ ಸಾಸ್ ಬಾಟಲಿಗಳನ್ನು ಆರ್‌ಎಸ್‌ಎಸ್ ಕಚೇರಿ ಆವರಣಕ್ಕೆ ಎಸೆದಿದ್ದಾರೆ. ಆದರೆ ಎರಡೂ ಬಾಟಲಿಗಳು ಕಾಂಪೌಂಡ್ ಬಳಿ ಬಿದ್ದಿವೆ. ಹೀಗಾಗಿ ಘಟನೆಯಲ್ಲಿ ಆರ್‌ಎಸ್‌ಎಸ್ ಕಚೇರಿಗೆ ಯಾವುದೇ ಹಾನಿಯಾಗಿಲ್ಲ.
ಏತನ್ಮಧ್ಯೆ, ರಾಂಚಿ ಪೊಲೀಸರು ಘಟನೆಯಲ್ಲಿ ಭಾಗಿಯಾಗಿರುವ ದಾಳಿಕೋರರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸಲಾಗಿದ್ದು, ದುಷ್ಕರ್ಮಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಂಚಿ ನಗರ ಎಸ್‌ಪಿ ಪರಾಸ್ ರಾಣಾ ಹೇಳಿದ್ದಾರೆ.”ಈ ಘಟನೆಯಲ್ಲಿ ಇಬ್ಬರು ಯುವಕರು ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಈ ವಿಷಯದ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಘಟಕ ಸೇರಿದಂತೆ ಹಲವಾರು ತಂಡಗಳನ್ನು ನಿಯೋಜಿಸಲಾಗಿದೆ” ಎಂದು ನಗರ ಎಸ್‌ಪಿ ತಿಳಿಸಿದ್ದಾರೆ.
ಇಬ್ಬರು ದಾಳಿಕೋರರು ಆರ್‌ಎಸ್‌ಎಸ್ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲು ಪ್ರಯತ್ನಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳನ್ನು ಪಡೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಎಸ್‌ಪಿ ಪ್ರಕಾರ, ಮೊದಲ ಬಾಟಲಿಯನ್ನು ಎಸೆದಾಗ, ಉರಿಯುತ್ತಿರುವ ಫ್ಯೂಸ್ ನೆಲದ ಮೇಲೆ ಬಿದ್ದಿದೆ. ಇದರಿಂದಾಗಿ ಪೆಟ್ರೋಲ್ ಬಾಂಬ್ ಸ್ಫೋಟಗೊಂಡಿಲ್ಲ. ನಂತರ ಎರಡನೇ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಆದರೆ ಅದು ಕಚೇರಿ ಕಟ್ಟಡವನ್ನು ತಲುಪಲು ವಿಫಲವಾಯಿತು ಎಂದು ಅವರು ಹೇಳಿದ್ದಾರೆ.