ಮಂಗಳೂರು: ಬೈಕಂಪಾಡಿ-ಕುಳೂರು ರಸ್ತೆ ಹದಗೆಟ್ಟು ನರಕ ಸದೃಶ, ವಾಹನ ಸವಾರರ ಪರದಾಟ.

ಮಂಗಳೂರು: ಮಂಗಳೂರಿನ ಬೈಕಂಪಾಡಿಯಿಂದ ಕುಳೂರಿನ ವರೆಗಿನ ರಾಷ್ಟ್ರೀಯ ಹೆದ್ದಾರಿಯು ಈಗಾಗಲೇ ಸಂಪೂರ್ಣವಾಗಿ ಹದಗೆಟ್ಟು ನರಕ ಸದೃಶವಾಗಿದ್ದು, ಸದ್ಯ ಮುಂದುವರಿದಿರುವ ಭಾರೀ ಮಳೆಯಿಂದಾಗಿ ಈ ಸಮಸ್ಯೆಯು ಮತ್ತಷ್ಟು ಬಿಗಡಾಯಿಸಿದೆ. ರಸ್ತೆಯಲ್ಲಿರುವ ದೊಡ್ಡ ಬಾವಿಗಳಂತಿರುವ ಗುಂಡಿಗಳು ಮಳೆನೀರಿನಿಂದ ತುಂಬಿಕೊಂಡಿದ್ದು, ಸವಾರರಿಗೆ ಗುಂಡಿಗಳ ಆಳವೇ ತಿಳಿಯದೆ ಅಪಘಾತಗಳು ಸಂಭವಿಸುತ್ತಿವೆ.

ಪ್ರಮುಖ ಕೈಗಾರಿಕಾ ಪ್ರದೇಶಕ್ಕೆ ನಿತ್ಯ ಸಾವಿರಾರು ಘನ ಲಾರಿಗಳು ಮತ್ತು ಭಾರೀ ವಾಹನಗಳು ಸಾಗುವ ಈ ಮಾರ್ಗದಲ್ಲಿ, ಮಳೆನೀರು ನಿಂತು ರಸ್ತೆಯು ಸಂಪೂರ್ಣ ಕೆಸರುಮಯವಾಗಿದೆ. ವಾಹನ ಸವಾರರು ಮತ್ತು ಕಾರ್ಮಿಕರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದ್ದು, ಜನಸಾಮಾನ್ಯರು ಹಾಗೂ ಪಾದಚಾರಿಗಳು ಪರದಾಡುತ್ತಿದ್ದಾರೆ.
ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ರಸ್ತೆಯ ಈ ದುರಸ್ಥಿಯಿಂದಾಗಿ ಕಾರ್ಮಿಕರು ಪರದಾಡುವಂತಾಗಿದೆ ಎಂದು ಕರ್ನಾಟಕ ರಾಜ್ಯ ಸಂಘಟಿತ ಕಾರ್ಮಿಕರ ಕೂಟದ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಕುಂಬ್ಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ರಸ್ತೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.