ನೋಯ್ಡಾ: ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ; ವಿದ್ಯುತ್ ವಾಹನ ಚಾರ್ಜಿಂಗ್ ವೇಳೆ ಕಿಡಿ, ಇಬ್ಬರು ಸಾ*ವು!

ನೋಯ್ಯಾ: ನೋಯ್ಡಾದ ಸೆಕ್ಟರ್ 66ರ ಮಾಮುರಾ ಗ್ರಾಮದಲ್ಲಿರುವ ಐದು ಅಂತಸ್ತಿನ ವಸತಿ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಫೇಸ್-3 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಿ+4 ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿತ್ತು. ತತ್‌ಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಪಂದಿಸಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ಗೌತಮ್ ಬುದ್ಧ ನಗರದ ಜಂಟಿ ಪೊಲೀಸ್ ಆಯುಕ್ತ ರಾಜೀವ್ ನಾರಾಯಣ್ ತಿಳಿಸಿದ್ದಾರೆ.
ಕಟ್ಟಡದಲ್ಲಿ ಸುಮಾರು 50 ಕುಟುಂಬಗಳು ವಾಸಿಸುತ್ತಿದ್ದವು. ರಕ್ಷಣಾ ಕಾರ್ಯಾಚರಣೆ ವೇಳೆ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಎಲೆಕ್ಟಿಕ್ ವಾಹನವೊಂದಕ್ಕೆ ಚಾರ್ಜ್ ಮಾಡುವಾಗ ಉಂಟಾದ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆ. ಅನಂತರ ಅದು ಹತ್ತಿರದಲ್ಲಿದ್ದ ಪೆಟ್ರೋಲ್ ವಾಹನಗಳಿಗೆ ಹರಡಿದೆ. ಇದೇ ಅಗ್ನಿ ಅವಘಡಕ್ಕೆ ಕಾರಣವಾಗಿದೆ ಎಂದು ನಾರಾಯಣ್ ತಿಳಿಸಿದ್ದಾರೆ.
ಪೊಲೀಸರು ಫೇಸ್-3 ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿವರವಾದ ತನಿಖೆಯ ಬಳಿಕವೇ ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.
