ಕರ್ನಾಟಕದ ನೂತನ ರಾಜ್ಯಪಾಲರಾಗಿ ನಾಳೆ ಡಾ. ಸುಧಾ ಯಾದವ್ ಪ್ರಮಾಣವಚನ!

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ (Sudha Yadav) ಅವರು ನಾಳೆ (ಅ.16) ಪ್ರಮಾಣವಚನ (Oath Ceremony) ಸ್ವೀಕಾರ ಮಾಡಲಿದ್ದಾರೆ.ಲೋಕಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಹಿರಿಯ ನಾಯಕಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯೆ ಡಾ. ಸುಧಾ ಯಾದವ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಇತ್ತೀಚಿಗಷ್ಟೇ ರಾಷ್ಟ್ರಪತಿ ದ್ರೌಪದಿ (President Droupadi Murmu) ಮುರ್ಮು ಅವರು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಈ ಬದಲಾವಣೆಯಲ್ಲಿ ನಾಲ್ವರಿಗೆ ಹೊಸದಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದ್ದು, ಇಬ್ಬರು ಹಾಲಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ.ಇನ್ನು ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ತಮಿಳುನಾಡಿನ ಜವಾಬ್ದಾರಿ ನೀಡಲಾಗಿದೆ. ಒಡಿಶಾದ ನೂತನ ರಾಜ್ಯಪಾಲರಾಗಿ ಬ್ರಜ್ ಮೋಹನ್ ರಾಮ್, ಉತ್ತರಾಖಂಡದ ರಾಜ್ಯಪಾಲರಾಗಿ ಡಾ. ಧಾಲ್ ಸಿಂಗ್ ಬಿಸೆನ್ ಹಾಗೂ ಸಿಕ್ಕಿಂನ ರಾಜ್ಯಪಾಲರಾಗಿ ದುಷ್ಯಂತ್ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.
