ಹೊಸದಿಲ್ಲಿ: ಮತದಾರರ ಪಟ್ಟಿಯಿಂದ ಹೆಸರುಗಳ ಸಾಮೂಹಿಕ ಕಡಿತ; ಮಾಜಿ ಸಿಇಸಿ ಎಸ್.ವೈ. ಖುರೇಷಿಯಿಂದ ತೀವ್ರ ಖಂಡನೆ!

ಹೊಸದಿಲ್ಲಿ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಸಾಮೂಹಿಕವಾಗಿ ತೆಗೆದುಹಾಕಿರುವುದನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಸ್. ವೈ. ಖುರೇಷಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮವನ್ನು ಅವರು “ತರ್ಕಹೀನ, ಅಸಮಂಜಸ, ಶ್ವೇಚ್ಛಾಚಾರ ಮತ್ತು ದುರುದ್ದೇಶಪೂರಿತ” ಎಂದು ಕರೆದಿದ್ದಾರೆ.
ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮತದಾರರ ಪಟ್ಟಿಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಿರುವುದು ಒಂದು ಹಗರಣ. ಕೃತಕ ಪ್ರಕ್ರಿಯೆಯೊಂದರ ಮೂಲಕ ದೇಶದ ಸುಮಾರು ಶೇ. 15ರಷ್ಟು ಜನಸಂಖ್ಯೆಯನ್ನು ಮತದಾರರ ಪಟ್ಟಿಯಿಂದಲೇ ಹೊರಹಾಕಲಾಗಿದೆ. ಇದು ಅತ್ಯಂತ ಆತಂಕಕಾರಿ ಮತ್ತು ದುರುದ್ದೇಶಪೂರಿತ ಕ್ರಮ” ಎಂದು ಆರೋಪಿಸಿದರು.

ದೇಶಾದ್ಯಂತ ಸುಮಾರು 13ರಿಂದ 14 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾದ ಈ ಕ್ರಮ ಮುಂದುವರಿಯಲು ಅವಕಾಶ ಮಾಡಿಕೊಡುವ ರೀತಿಯಲ್ಲಿ ಸುಪ್ರೀಂ ಕೋರ್ಟ್ “ಬಹಳ ಉದಾರ ನಿಲುವು” ತಳೆದಿರುವುದು ತಮಗೆ ಆಶ್ಚರ್ಯ ತಂದಿದೆ ಎಂದು ಖುರೇಷಿ ಹೇಳಿದರು.
ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
“ಪಟ್ಟಿಯಿಂದ ತೆಗೆದುಹಾಕಲಾದವರಲ್ಲಿ ಸುಮಾರು ಶೇ. 90ರಷ್ಟು ಮಂದಿ ಖಂಡಿತವಾಗಿಯೂ ಮತದಾನ ಮಾಡಲು ಅರ್ಹರಾಗಿದ್ದಾರೆ. ಹಾಗಾದರೆ ಇವರೆಲ್ಲರೂ ವಲಸೆ ಹೋಗಿದ್ದಾರೆಯೇ? ಒಂದು ವೇಳೆ ಅವರು ವಲಸೆ ಹೋಗಿದ್ದರೂ, ಹೊಸ ಸ್ಥಳದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಬೇಕಿತ್ತು. ಆದರೆ ಇಲ್ಲಿ ಆಗುತ್ತಿರುವುದು ಕೇವಲ ಹೆಸರುಗಳನ್ನು ತೆಗೆದುಹಾಕುವ ಕೆಲಸ. ಇಲ್ಲಿ ಕೇವಲ ಹೊರ-ವಲಸೆ ಮಾತ್ರ ನಡೆಯುತ್ತಿದೆಯೇ? ಯಾವುದೇ ಒಳ-ವಲಸೆ ನಡೆಯುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದರು.
“ಇದು ಸಂಪೂರ್ಣವಾಗಿ ತರ್ಕಹೀನ, ಅಸಮಂಜಸ ಮತ್ತು ಶ್ವೇಚ್ಛಾಚಾರದ ಕ್ರಮ” ಎಂದು ಅವರು ಹೇಳಿದರು.
2002ರ ಮತದಾರರ ಪಟ್ಟಿಯ ನಿಖರತೆಯನ್ನೇ ಪ್ರಶ್ನಿಸಿದ ಖುರೇಷಿ
ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಹೋಲಿಕೆಗಾಗಿ ಬಳಸುತ್ತಿರುವ 2002ರ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯನ್ನೇ ಮಾಜಿ ಸಿಇಸಿ ಪ್ರಶ್ನಿಸಿದ್ದಾರೆ.
“2002ರ ಮತದಾರರ ಪಟ್ಟಿ ಏನು ಬೈಬಲ್ಲಿಂದ ಬಂದಿದೆಯೇ? ಅದರಲ್ಲಿ ಯಾವುದೇ ತಪ್ಪುಗಳಿರಲಿಲ್ಲವೇ? ನನ್ನ ಸ್ವಂತ ತಂದೆಯ ಹೆಸರೇ ಆ ಪಟ್ಟಿಯಲ್ಲಿ ತಪ್ಪಾಗಿ ನಮೂದಾಗಿತ್ತು. ಹೀಗಿರುವಾಗ ಆ ಪಟ್ಟಿಯನ್ನು ಕೇವಲ ಉಲ್ಲೇಖಕ್ಕಾಗಿ ಬಳಸಬಹುದು. ಆದರೆ ಅದನ್ನೇ ಅಂತಿಮ ಮಾನದಂಡವನ್ನಾಗಿ ಮಾಡುವುದು ಹೇಗೆ ಸಾಧ್ಯ?” ಎಂದು ಖುರೇಷಿ ಪ್ರಶ್ನಿಸಿದರು.