ಮೈಸೂರಿನಲ್ಲಿ ಪತಿಯ ಹತ್ಯೆ: ಪತ್ನಿ ಹಾಗೂ ಪ್ರಿಯಕರ ಪೊಲೀಸ್ ಬಲೆಗೆ!

ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಜಿಲ್ಲಾ ಪೊಲೀಸರು (Mysuru Police) ಬಂಧಿಸಿದ್ದಾರೆ.
ಮೈಸೂರಿನ ಹುಣಸೂರು (Hunasuru) ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 35 ವರ್ಷದ ರಾಮಪ್ರಸಾದ್ ಕೊಲೆಯಾದ ದುರ್ದೈವಿ. ಮೈಸೂರಿನ ಕೆಸರೆಯ ಪವಿತ್ರಾಳನ್ನು ರಾಮಪ್ರಸಾದ್ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಗಂಡು ಮಗು ಹಾಗೂ 9 ವರ್ಷದ ಹೆಣ್ಣು ಮಗು ಇದ್ದಾರೆಪೊಲೀಸರ ಮಾಹಿತಿ ಪ್ರಕಾರ, ಈ ಸಂಸಾರದಲ್ಲಿ ಮತ್ತೊಬ್ಬನ ಪ್ರವೇಶವಾಗಿತ್ತು. ಅದೇ ಗ್ರಾಮದ ಸುನೀಲ್ ಎಂಬಾತನ ಜೊತೆ ಪವಿತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಕ್ಟೋಬರ್ 16ರಂದು ಕುಡಿದು ಮನೆಗೆ ಬಂದಿದ್ದ ರಾಮಪ್ರಸಾದ್ಗೆ ಪತ್ನಿ ಪವಿತ್ರಾ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಳು. ಆದರೆ, ಇದರಿಂದ ರಾಮಪ್ರಸಾದ್ ಮೃತಪಟ್ಟಿರಲಿಲ್ಲ. ಬಳಿಕ ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ದತ್ತೂರಿ ಬೀಜದ ಬಗ್ಗೆ ಯೂಟ್ಯೂಬ್ನಲ್ಲಿ ಮಾಹಿತಿ ಪಡೆದು ಕೃತ್ಯ ಎಸಗಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
