ಬಿಪಿಸಿಎಲ್‌ಗೆ ಕಾನೂನು ಸಂಕಷ್ಟ: ಬಗ್ಗುಂಡಿ ಕೆರೆ ಮಾಲಿನ್ಯದ ವಿರುದ್ದ ‘ದ ಸ್ಯಾಫ್ರನ್ ಫ್ರಂಟ್ ದೂರು!

ಮಂಗಳೂರು: ಬಗ್ಗುಂಡಿ ಕೆರೆಗೆ ಕೈಗಾರಿಕಾ ಹಾಗೂ ಇತರ ತ್ಯಾಜ್ಯಗಳು ಹರಿಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ ಸ್ಯಾಫ್ರನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಪಿಸಿಎಲ್ ಸಂಸ್ಥೆ, ಕೆರೆಯ ಅಕ್ಕಪಕ್ಕದಲ್ಲಿರುವ ವಸತಿ ಸಮುಚ್ಚಯಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವೆಟ್‌ವೆಲ್‌ನಿಂದ ನೇರವಾಗಿ ಬಗ್ಗುಂಡಿ ಕೆರೆಗೆ ತ್ಯಾಜ್ಯ ಹರಿಯುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದ ಕೆರೆಯ ನೀರು ಕಲುಷಿತಗೊಂಡು ಸುತ್ತಮುತ್ತಲಿನ ಕೃಷಿ ಭೂಮಿ, ಅಂತರ್ಜಲ ಹಾಗೂ ಜಲಚರ ಪರಿಸರ ವ್ಯವಸ್ಥೆಗೆ ಹಾನಿಯಾಗಿದ್ದು, ಕೃಷಿಕರ ಜೀವನೋಪಾಯಕ್ಕೆ ಸಂಕಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೂರು ಕಡೆಗಳಿಂದ ಹರಿಯುತ್ತಿರುವ ತ್ಯಾಜ್ಯದ ಮೂಲವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಅನಧಿಕೃತ ತ್ಯಾಜ್ಯ ವಿಸರ್ಜನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಕೆರೆಯನ್ನು ಪುನರುಜ್ಜೀವನಗೊಳಿಸಬೇಕು. ಮಾಲಿನ್ಯದಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ತ್ವರಿತ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದರ ಜೊತೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಲು ದ ಸ್ಯಾಫ್ರನ್ ಫ್ರಂಟ್ ನಿರ್ಧರಿಸಿದೆ.