ಬೆಂಗಳೂರು: ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿತ್ತು ನಾಗರಹಾವು ಇಲಿ ಎಂದು ನಿರ್ಲಕ್ಷಿಸಿದ ಅಣ್ಣ-ತಂಗಿಗೆ ಕಾದಿತ್ತು ಶಾಕ್!

ಬೆಂಗಳೂರು : ರಾತ್ರಿ ನಿದ್ರೆಯಲ್ಲಿದ್ದಾಗ ಮೈಮೇಲೆ ಏನೋ ಹರಿದಾಡಿದಂತಾಗಿ, “ಇಲಿ ಇರಬಹುದು” ಎಂದು ನಿರ್ಲಕ್ಷಿಸಿ ಮಲಗಿದ್ದ ಅಣ್ಣ-ತಂಗಿಗೆ ಬೆಳಗಿನ ಜಾವ ದಿಘಿಲುಗೊಳಿಸುವ ಆಘಾತವೊಂದು ಕಾದಿತ್ತು. ತಲೆದಿಂಬಿನ ಕೆಳಗೆ ಬೃಹತ್ ನಾಗರಹಾವು ಸುರುಳಿ ಸುತ್ತಿ ಮಲಗಿರುವ ದೃಶ್ಯ ಕಂಡು ಇಡೀ ಕುಟುಂಬವೇ ಬೆಚ್ಚಿಬಿದ್ದ ಘಟನೆ ನಗರದ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.

ಬಾಗಲಗುಂಟೆಯ ಭೈರವೇಶ್ವರ ನಗರದ ನಿವಾಸವೊಂದರಲ್ಲಿ ಬುಧವಾರ ರಾತ್ರಿ ಕೊಠಡಿಯ ಕಿಟಕಿಯನ್ನು ತೆರೆದಿಡಲಾಗಿತ್ತು. ಈ ಕಿಟಕಿಯ ಮೂಲಕ ಒಳಗೆ ಬಂದ ವಿಷಪೂರಿತ ನಾಗರಹಾವು, ಅದೇ ಕೋಣೆಯಲ್ಲಿ ಮಲಗಿದ್ದ ಅಣ್ಣ ಮತ್ತು ತಂಗಿಯ ಹಾಸಿಗೆಯನ್ನೇ ಆಶ್ರಯಿಸಿಕೊಂಡಿತ್ತು. ರಾತ್ರಿ ವೇಳೆ ಗಾಢ ನಿದ್ರೆಯಲ್ಲಿದ್ದ ಅಣ್ಣ-ತಂಗಿಯ ಮೈಮೇಲೆ ಹಾವು ಹರಿದಾಡಿದ ಅನುಭವವಾಗಿದೆಯಾದರೂ, ಕತ್ತಲೆಯಲ್ಲಿ ‘ಇಲಿ ಇರಬಹುದು’ ಎಂದು ಭಾವಿಸಿ ಅದನ್ನು ಗಂಭೀರವಾಗಿ ಪರಿಗಣಿಸದೆ ಇಬ್ಬರೂ ನಿದ್ರೆ ಮಾಡಿದ್ದಾರೆ. ಅದೃಷ್ಟವಶಾತ್ ಹಾವಿಗೆ ಯಾವುದೇ ತೊಂದರೆಯಾಗದ ಕಾರಣ ಅದು ಕಚ್ಚಿಲ್ಲ.
ಆದರೆ ಬೆಳಗಿನ ಜಾವ ಎದ್ದು ಹಾಸಿಗೆ ಸರಿಪಡಿಸುವ ವೇಳೆ ದಿಂಬಿನ ಕೆಳಗೆ ಬೃಹತ್ ಗಾತ್ರದ ನಾಗರಹಾವು ಆರಾಮಾಗಿ ಮಲಗಿಗೊಂಡಿತ್ತು. ದಿಂಬಿನ ಕೆಳಗೆ ಹಾವು ಅಡಗಿಕೊಂಡಿರುವುದನ್ನು ಕಂಡು ಗಾಬರಿಗೊಂಡ ಕುಟುಂಬಸ್ಥರು, ತಕ್ಷಣವೇ ಉರಗ ರಕ್ಷಕ ನಾಗೇಂದ್ರ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ನಾಗೇಂದ್ರ ಅವರು, ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ಅತ್ಯಂತ ಜಪದಿಂದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಬಳಿಕ ಆ ಹಾವನ್ನು ಹೆಸರಘಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದ್ದು, ಸ್ವಲ್ಪದರಲ್ಲೇ ದೊಡ್ಡದೊಂದು ಅನಾಹುತ ತಪ್ಪಿದಂತಾಗಿ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿ ವೇಳೆ ಮನೆಗಳ ಕಿಟಕಿ ಹಾಗೂ ಬಾಗಿಲುಗಳನ್ನು ಕಡ್ಡಾಯವಾಗಿ ಮುಚ್ಚಿಡುವುದು ಸೂಕ್ತ ಹಾಗೂ ಹಾವುಗಳು ಕಂಡುಬಂದ ಕೂಡಲೇ ಗಾಬರಿಯಾಗದೆ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ತಜ್ಞರು ಮನವಿ ಮಾಡಿದ್ದಾರೆ.