ಜೋಡೆತ್ತಿನ ಕೃಷಿಕರ ಪರ ‘ದ ಸ್ಯಾಫ್ರನ್ ಫ್ರಂಟ್-ನಂದಿ ಸೇನೆ ಒಗ್ಗಟ್ಟು:ನವೆಂಬರ್ 5ರಂದು ಹೆದ್ದಾರಿ ತಡೆಗೆ ಎಚ್ಚರಿಕೆ

ಮಂಗಳೂರು: ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಆರಂಭವಾದ ನಂದಿ ಕೂಗು ಅಭಿಯಾನವನ್ನು ‘ದ ಸ್ಯಾಫ್ರನ್ ಫ್ರಂಟ್’ (THE SAFFRON FRONT) ಮುನ್ನಡೆಸುತ್ತಿದ್ದು, ಜೋಡೆತ್ತಿನ ಕೃಷಿಕರ ಹಕ್ಕುಗಳ ರಕ್ಷಣೆ ಹಾಗೂ ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ನಂದಿ ಸೇನೆ ಕೈಜೋಡಿಸಿದೆ.

ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ರಾಜ್ಯದ ಬಜೆಟ್ನಲ್ಲಿ ಶೇ.10ರಷ್ಟು ಅನುದಾನ ಮೀಸಲಿಟ್ಟು, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11,000 ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಕೂಡಲೇ ಜಾರಿಗೆ ತರಬೇಕೆಂದು ದ ಸ್ಯಾಫ್ರನ್ ಫ್ರಂಟ್ ಹಾಗೂ ನಂದಿ ಸೇನೆ ಜಂಟಿಯಾಗಿ ಆಗ್ರಹಿಸಿವೆ.
ಕಳೆದ ಮೂರು ವರ್ಷಗಳಿಂದ ಜೋಡೆತ್ತಿನ ಕೃಷಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ನವೆಂಬರ್ 5ರಂದು ಕನಿಷ್ಠ ಒಂದು ಲಕ್ಷ ಎತ್ತಿನ ಬಂಡಿಗಳೊಂದಿಗೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ನಂದಿ ಸೇನೆ ಎಚ್ಚರಿಸಿದೆ.
ಭಾರತೀಯ ಕೃಷಿ ಪರಂಪರೆಯ ಉಳಿವು, ಗೋಸಂರಕ್ಷಣೆ ಹಾಗೂ ರೈತರ ಆರ್ಥಿಕ ಭದ್ರತೆಗಾಗಿ ದ ಸ್ಯಾಫ್ರನ್ ಫ್ರಂಟ್ ಮತ್ತು ನಂದಿ ಸೇನೆ ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ. ಜೋಡೆತ್ತಿನ ಕೃಷಿಕರ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಉಭಯ ಸಂಘಟನೆಗಳು ಆಗ್ರಹಿಸಿವೆ.