ಮೂಡಿಗೆರೆ: ಭಾರೀ ಮಳೆ ಹಿನ್ನೆಲೆ; ಸೋಮವಾರ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ!

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ರವಿವಾರ ಮಧ್ಯಾಹ್ನದಿಂದ ಭಾರೀ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ತಾಲೂಕಿನ ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಶಾಲೆಗಳಿಗೆ ಸೋಮವಾರ (ಜು.6) ರಜೆ ಘೋಷಿಸಲಾಗಿದೆ. ಈ ಕುರಿತು ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಆದೇಶ ಹೊರಡಿಸಿದ್ದಾರೆ.
ಭಾರೀ ಗಾಳಿ-ಮಳೆಯಿಂದ ಮೂಡಿಗೆರೆ ತಾಲೂಕಿನ ವಿವಿಧೆಡೆ ಬೃಹತ್ ಮರಗಳು ರಸ್ತೆಗಳಿಗೆ ಉರುಳಿವೆ. ಇದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ. ಮತ್ತಿಕಟ್ಟೆ ಗ್ರಾಮದಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಪ್ರದೇಶದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದ ಪರಿಣಾಮ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಮೊಟಕುಗೊಂಡಿದೆ.
ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಬೆಟ್ಟಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಪೋಸನದಿಣ್ಣೆ ನಿವಾಸಿ ಪೂರ್ಣೇಶ್ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದಿದೆ. ಇದರಿಂದ ಮೇಲ್ಟಾವಣಿ ಹಾನಿಯಾಗಿದೆ.
ಕಳೆದೆರಡು ದಿನಗಳಿಂದ ಮಳೆ ತೀವ್ರಗೊಂಡಿದ್ದು, ಮಲೆನಾಡು ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ.
