ಬಂಟ್ವಾಳ: ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಮೇಲೆ ಭೀಕರ ಹಲ್ಲೆ; ಆರೋಪಿ ಜವ್ವಾರ್ ವಿರುದ್ಧ ಪ್ರಕರಣ ದಾಖಲು!

ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾರ್ವಜನಿಕ ರಸ್ತೆಯಲ್ಲೇ ಭೀಕರವಾಗಿ ದಾಳಿ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಮೊಂತಿಮಾರ್ ಪಡ್ಪು ಎಂಬಲ್ಲಿ ಸೋಮವಾರ ನಡೆದಿದೆ. ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಸ್ಥಳೀಯರು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿದ್ಯಾರ್ಥಿನಿ ಎಂದಿನಂತೆ ತನ್ನ ಕಾಲೇಜಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಜವ್ವರ್ ಎಂಬಾತ, ಯುವತಿಯೊಂದಿಗೆ ಜಗಳ ತೆಗೆದಿದ್ದಾನೆ. ಪರಸ್ಪರ ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆ ಆಕ್ರೋಶಗೊಂಡ ಜವ್ವರ್, ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ವಿದ್ಯಾರ್ಥಿನಿಯ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಯುವತಿ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿ ತೀವ್ರ ರಕ್ತಸ್ರಾವದೊಂದಿಗೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾಳೆ.
ರಸ್ತೆಯಲ್ಲಿ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು ಆಕೆಯನ್ನು ರಕ್ಷಿಸಿದ್ದಾರೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳೀಯ ನಿವಾಸಿ ಜವ್ವಾರ್ ಎಂಬಾತ ಹಲ್ಲೆಗೆ ಯತ್ನಿಸಿದ ಬಗ್ಗೆ ಆರೋಪ ಕೇಳಿಬಂದಿದೆ. ಆತ ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದಾನೆ ಎನ್ನಲಾಗಿದೆ. ಸಾರ್ವಜನಿಕರು ರಕ್ಷಣೆಗೆ ಧಾವಿಸುತ್ತಿದ್ದಂತೆ ಆತಂಕಗೊಂಡ ಆರೋಪಿ ಮೊಹಮ್ಮದ್ ಜವ್ವಾರ್, ನೇರವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಬಾಲಕಿಯು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಪ್ರಸ್ತುತ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.