ಉಳ್ಳಾಲದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ!

ಉಳ್ಳಾಲ : ಶಾಲೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದ ಬಾಗಲಕೋಟೆ ಮೂಲದ ಯುವಕನನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ, ಪ್ರಸ್ತುತ ಗಾರೆ ಕೆಲಸ ನಿರ್ವಹಿಸುತ್ತಿರುವ ಗೂಡಾಸಾಬ್ ಯಾನೆ ಆಶಿಫ್ (23) ಬಂಧಿತ ಆರೋಪಿ.ಉಳ್ಳಾಲ ತಾಲೂಕಿನ ಕಲ್ಲಾಪು ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಕುಟುಂಬದ ಇಬ್ಬರು ಅಪ್ರಾಪ್ತ ಸಹೋದರಿಯರು ಸಮೀಪದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಪೋಷಕರು ಇಬ್ಬರೂ ಹೆಣ್ಣುಮಕ್ಕಳನ್ನು ಎಂದಿನಂತೆ ಶಾಲೆಗೆ ಕಳುಹಿಸಿಕೊಟ್ಟಿದ್ದರು. ಆದರೆ, ಇಬ್ಬರು ಸಹೋದರಿಯರಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಹಿರಿಯ ಮಗಳು ಶಾಲೆಗೆ ತಲುಪಿಲ್ಲವೆಂದು ಶಾಲಾ ಶಿಕ್ಷಕಿ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ.

ನಾಪತ್ತೆಯಾದ ಅಪ್ರಾಪ್ತ ಬಾಲಕಿಯನ್ನು ಗೂಡಾಸಾಬ್ ಯಾನೆ ಆಶಿಫ್ ಶಾಲೆಯ ಬಳಿ ಹಿಂಬಾಲಿಸಿಕೊಂಡು ಬಂದು ಮಾತನಾಡಿಸಲು ಯತ್ನಿಸುತ್ತಿದ್ದ ಎಂಬ ವಿಚಾರವನ್ನು ಬಾಲಕಿ ಈ ಹಿಂದೆಯೇ ತನ್ನ ತಾಯಿಗೆ ತಿಳಿಸಿದ್ದಳು. ಈ ಸಂಬಂಧ ಆರೋಪಿಗೆ ಪೋಷಕರು ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದ್ದರು. ಆದಾಗ್ಯೂ ಆರೋಪಿಯು ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದಾನೆ ಎಂದು ಆರೋಪಿಸಿ, ಮಗಳನ್ನು ಪತ್ತೆಹಚ್ಚಿ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಾಯಿ ಮಂಗಳವಾರ ಸಂಜೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಉಳ್ಳಾಲ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮಂಗಳವಾರ ರಾತ್ರಿಯೇ ಸೋಮೇಶ್ವರ ಪ್ರದೇಶದಲ್ಲಿ ಆರೋಪಿ ಗೂಡಾಸಾಬ್ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.