ಅಮೆರಿಕದ ಹಿಂದೂ ದೇವಾಲಯದಲ್ಲಿ ಮಾಸ್ ಶೂಟಿಂಗ್ ಸಂಚು: 19 ವರ್ಷದ ಯುವಕ ಪೊಲೀಸ್ ವಶಕ್ಕೆ!

ವಾಷಿಂಗ್ಟನ್: ಹಿಂದೂ ದೇವಾಲಯದಲ್ಲಿ ಭಾರತೀಯರನ್ನ ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ (Mass Shooting) ನಡೆಸಲು ಸಂಚು ರೂಪಿಸಿದ್ದ ಅಮೆರಿಕದ ಯುವಕನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ.ಹೌದು. ಅಮೆರಿಕದ ಇಲಿನಾಯ್ಸ್ನಲ್ಲಿರುವ ಹಿಂದೂ ದೇವಾಲಯದಲ್ಲಿ (Hindu Temple) ಭಾರತೀಯರನ್ನ ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಅಮೆರಿಕದ ಪ್ರಜೆಯನ್ನ ವಶಕ್ಕೆ ಬಂಧಿಸಲಾಗಿದೆ. ಆತನ ರೈಫಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭೀಕರ ಮಾರಣ ಹೋಮ ತಪ್ಪಿದೆ, ಜೊತೆಗೆ ಸಂಚು ಕೂಡ ಬಯಲಾಗಿದೆ ಎಂದು ಆತನ ಸಹೋದ್ಯೋಗಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಂಧಿತನನ್ನು ಇಲಿನಾಯ್ಸ್ನ ಪಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಾಪೊರಾಕಿಸ್ (Alexandros Paporakis) ಎಂದು ಗುರುತಿಸಲಾಗಿದೆ. ಈತ ಟ್ಯಾಕೋ ಬೆಲ್ (Taco Bell) ರೆಸ್ಟೋರೆಂಟ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಇಲಿನಾಯ್ಸ್ನ ಅರೋರಾ ನಗರದ ನೈಋತ್ಯ ಉಪನಗರದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯದಲ್ಲಿ ಭಾರತೀಯರನ್ನ (Indians) ಗುರಿಯಾಗಿಸಿ ಸಾಮೂಹಿಕ ಗುಂಡಿನ ದಾಳಿ ನಡೆಸಲು ಈತ ಯೋಜಿಸಿದ್ದ. ಕಳೆದ ಭಾನುವಾರ ಆತ ದೇವಾಲಯಕ್ಕೆ ತೆರಳಿದ್ದ ಎಂದು ವರದಿಗಳು ತಿಳಿಸಿವೆ.