ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ; ಅಣ್ಣನನ್ನು ಚಾಕುವಿನಿಂದ ಇರಿದು ಹ*ತ್ಯೆಗೈದ ಸ್ವಂತ ತಮ್ಮ!

ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ತಮ್ಮನೇ ಚಾಕುವಿನಿಂದ ಇರಿದು ಸ್ವಂತ ಅಣ್ಣನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್ ಬಳಿ ರವಿವಾರ (ಆಗಸ್ಟ್ 30) ತಡರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಕೊಲೆಯಾದ ದುರ್ದೈವಿ. ಈತನ ತಮ್ಮ ರಾಜು (36) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಅಡಿವೆಪ್ಪ ಹಾಗೂ ರಾಜು ತಮ್ಮ ತಾಯಿಯೊಂದಿಗೆ ಕೊಟ್ಟಾರ ಕ್ರಾಸ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಾಯಿ ಸಣ್ಣ ಗೂಡಂಗಡಿ ನಡೆಸುತ್ತಿದ್ದರೆ, ಇಬ್ಬರು ಸಹೋದರರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರಿಗೂ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ.
ರವಿವಾರ ರಾತ್ರಿ 10:30 ರಿಂದ 11 ಗಂಟೆಯ ನಡುವೆ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಪ್ರಾರಂಭವಾಗಿದೆ. ಈ ವೇಳೆ ರೊಚ್ಚಿಗೆದ್ದ ತಮ್ಮ ರಾಜು, ಅಣ್ಣ ಅಡಿವೆಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ. ತಾಯಿ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬಂದು ನೋಡಿದಾಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಮ್ಮ ರಾಜುವಿನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.