ಬೆಂಗಳೂರು: ಅನೈರ್ಮಲ್ಯ ಹಾಗೂ ಗಂಭೀರ ಲೋಪ; ಬಿಕಾನೇರ್ ಸ್ವೀಟ್ಸ್ ಸಿಹಿತಿಂಡಿ ತಯಾರಿಕಾ ಘಟಕ ಜಪ್ತಿ!

ಬೆಂಗಳೂರು: ನಗರದ ಬಿಕಾನೇರ್ ಸ್ವೀಟ್ಸ್‌ಗೆ (Bikaner Sweets) ಸಿಹಿತಿಂಡಿಗಳನ್ನ ತಯಾರಿಸಿ ಸರಬರಾಜು ಮಾಡುತ್ತಿದ್ದ ತಯಾರಿಕಾ ಘಟಕವನ್ನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಘಟಕದಲ್ಲಿ ಅನೈರ್ಮಲ್ಯಕರ ಪರಿಸ್ಥಿತಿ ಹಾಗೂ ಸಿಹಿ ಖಾದ್ಯಗಳ ಲೇಬಲಿಂಗ್‌ಗೆ ಸಂಬಂಧಿಸಿದ ಗಂಭೀರ ಲೋಪಗಳು ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಈ ತಯಾರಿಕಾ ಘಟಕದಲ್ಲಿ ಸುಮಾರು 60 ಮಾದರಿಯ ಸಿಹಿತಿಂಡಿ ಖಾದ್ಯಗಳನ್ನ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಬೆಂಗಳೂರಿನಲ್ಲಿರುವ (Bengaluru) ಬಿಕಾನೇರ್ ಸ್ವೀಟ್ಸ್ ಬೇಕರಿ ಹಾಗೂ ಮಾರಾಟ ಮಳಿಗೆಗಳಿಗೆ ಇಲ್ಲಿಂದಲೇ ಸಿಹಿತಿಂಡಿಗಳನ್ನ ಸರಬರಾಜು ಮಾಡಲಾಗುತ್ತಿತ್ತು.
ಅನೈರ್ಮಲ್ಯ, ಲೇಬಲಿಂಗ್ ಲೋಪ; ಗೋಡೌನ್ ಸೀಜ್
ತಯಾರಿಕಾ ಘಟಕದಲ್ಲಿ ಸ್ವಚ್ಛತೆಯ ಕೊರತೆ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಕಂಡುಬಂದ ಹಿನ್ನೆಲೆಯಲ್ಲಿ FDA ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಘಟಕವನ್ನ ಸೀಜ್ ಮಾಡಿದ್ದಾರೆ. ಸದ್ಯ 15 ದಿನಗಳ ಕಾಲ ಸಿಹಿ ಖಾದ್ಯಗಳ ತಯಾರಿಕೆ ನಡೆಸಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಸೂಚಿಸಿರುವುದಾಗಿ ತಿಳಿದುಬಂದಿದೆ.
ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಸಮರ್ಪಕ ಉತ್ತರ ನೀಡದಿದ್ದರೇ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳದಿದ್ದರೇ ಸೀಜ್ ಕ್ರಮ ಮುಂದುವರಿಸುವ ಸಾಧ್ಯತೆ ಇದೆ.
ಇಂದು ಬಿಕಾನೇರ್ ಸ್ವೀಟ್ಸ್ ಮಾಲೀಕರ ವಿಚಾರಣೆ
ಘಟಕದ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಇಂದು FDA ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ತಯಾರಿಕಾ ಘಟಕದಲ್ಲಿನ ಅನೈರ್ಮಲ್ಯ ಹಾಗೂ ಲೇಬಲಿಂಗ್‌ನಲ್ಲಿ ಕಂಡುಬಂದ ದೋಷಗಳ ಕುರಿತು ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
‘ತಪ್ಪು ಮಾಡಿದ್ದೇವೆ, ಸರಿಪಡಿಸಿಕೊಳ್ಳುತ್ತೇವೆ’ ಎಂದ ಮಾಲೀಕ
ಈ ಕುರಿತು ʻಪಬ್ಲಿಕ್ ಟಿʼವಿಗೆ ಪ್ರತಿಕ್ರಿಯಿಸಿರುವ ಬಿಕಾನೇರ್ ಸ್ವೀಟ್ಸ್ ತಯಾರಿಕಾ ಘಟಕದ ಮಾಲೀಕ ನರೇಶ್, ಕೆಲವು ನಿಯಮಗಳನ್ನು ಪಾಲಿಸುವಲ್ಲಿ ಲೋಪವಾಗಿರುವುದನ್ನ ಒಪ್ಪಿಕೊಂಡಿದ್ದಾರೆ. ನಾವು ತಪ್ಪು ಮಾಡಿದ್ದೇವೆ, ತಪ್ಪನ್ನು ಸರಿಮಾಡಿಕೊಳ್ಳುತ್ತೇವೆ. ಕೈಗೆ ಗ್ಲೌಸ್, ತಲೆಗೆ ಟೋಪಿ ಸೇರಿದಂತೆ ಸ್ವಚ್ಛತೆಯ ವಿಚಾರದಲ್ಲಿ ಕೊರತೆ ಇತ್ತು. ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದೇವೆ. ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನೋಟಿಸ್‌ಗೆ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುವುದು. ಸ್ವಚ್ಛತೆ ಸೇರಿದಂತೆ ಅಧಿಕಾರಿಗಳು ಸೂಚಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಿದ ಬಳಿಕವೇ ಸೀಜ್ ತೆರವುಗೊಳಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಸದ್ಯ FDA ಅಧಿಕಾರಿಗಳ ಕ್ರಮದ ಬಳಿಕ ಬಿಕಾನೇರ್ ಸ್ವೀಟ್ಸ್ ತಯಾರಿಕಾ ಘಟಕದ ಮುಂದಿನ ಕ್ರಮಗಳ ಮೇಲೆ ಗಮನ ನೆಟ್ಟಿದೆ.