ಕೇರಳ: ತಾಯಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಳೆಂಬ ಅನುಮಾನ; ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಭೀಕರ ಕೊಲೆ!

ತ್ರಿಶೂರ್ ಅಗಸ್ಟ್ 18: ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂಬ ಅನುಮಾನದಿಂದ 46 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಪವರಟ್ಟಿಯಲ್ಲಿ ಸೋಮವಾರ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಡಾಲಿ (69) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆಕೆಯ ಮಗ ಬೆನ್ಹಾರ್ (46) ಎಂಬಾತನನ್ನು ಪವರಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ

ಸೋಮವಾರ ಬೆಳಿಗ್ಗೆ 10.30 ರ ಸುಮಾರಿಗೆ ಡಾಲಿ ಅವರು ತಮ್ಮ ಮನೆಯ ವರಾಂಡಾದಲ್ಲಿ ಗುತ್ತಿಗೆ ಕೆಲಸಗಾರ ಡೇವಿಸ್ (57) ಅವರೊಂದಿಗೆ ಮನೆ ನವೀಕರಣದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಮನೆಯಿಂದ ಹೊರಬಂದ ಬೆನ್ಹಾರ್, ಇದ್ದಕ್ಕಿದ್ದಂತೆ ತಾಯಿಯ ಕುತ್ತಿಗೆ ಹಿಡಿದು ಚಾಕುವಿನಿಂದ ಇರಿದಿದ್ದಾನೆ.
ಪ್ರಾಣಭಯದಿಂದ ಓಡಲು ಯತ್ನಿಸಿದ ಡಾಲಿ ನೆಲಕ್ಕೆ ಬಿದ್ದಾಗ, ಆರೋಪಿ ಮತ್ತೊಮ್ಮೆ ಇರಿದಿದ್ದಾನೆ. ಬಳಿಕ ಮನೆಯೊಳಗೆ ಹೋಗಿ ಮತ್ತೊಂದು ಆಯುಧವನ್ನು ತಂದು ಪದೇ ಪದೇ ತಾಯಿಗೆ ಇರಿದು ಗಾಯಗೊಳಿಸಿದ್ದಾನೆ. ತಡೆಯಲು ಬಂದ ಕೆಲಸಗಾರ ಡೇವಿಸ್ ಅವರ ಕೈಗೂ ಚಾಕು ಇರಿದು ಗಾಯಗೊಳಿಸಲಾಗಿದೆ. ಸ್ಥಳೀಯರು ತಕ್ಷಣವೇ ರಕ್ತದ ಮಡುವಿನಲ್ಲಿದ್ದ ಡಾಲಿ ಅವರನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರಾದರೂ, ಬೆಳಿಗ್ಗೆ 11.30 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಖಿನ್ನತೆ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬೆನ್ಹಾರ್, ಘಟನೆಯ ಬಳಿಕ ಮನೆಯೊಳಗೆ ಶಾಂತವಾಗಿ ಕುಳಿತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. “ಆರಂಭದಲ್ಲಿ ತಾಯಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆಂದು ಅನುಮಾನಪಟ್ಟು ಹಲ್ಲೆ ಮಾಡಿದ್ದಾಗಿ ಹೇಳಿದ್ದ. ಆದರೆ ಬಳಿಕ ‘ನನ್ನ ತಾಯಿ ಚೆನ್ನಾಗಿದ್ದಾರಾ?’ ಎಂದು ಪೊಲೀಸರನ್ನೇ ಪ್ರಶ್ನಿಸುತ್ತಿದ್ದು, ನಿರಂತರವಾಗಿ ಹೇಳಿಕೆ ಬದಲಾಯಿಸುತ್ತಿದ್ದಾನೆ” ಎಂದು ಗುರುವಾಯೂರ್ ಎಸಿಪಿ ಸುರೇಂದ್ರನ್ ಮಂಘಾಟ್ ತಿಳಿಸಿದ್ದಾರೆ.
ಪವರಟ್ಟಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ) ಹಾಗೂ 118(1) ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.