ಗೋಹತ್ಯೆ ನಿಷೇಧ ಆದೇಶ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ!

ಚೆನ್ನೈ: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧವನ್ನು ವಿಧಿಸುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯಿದೆ- 1958ರ ಸೆಕ್ಷನ್ 4ರ ಅಡಿಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಹಸುವನ್ನು ವಧೆ ಮಾಡಲು ಅವಕಾಶ ನೀಡುತ್ತದೆ. ಆದರೆ ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯಿದೆ 1958ರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯವು ವಾದಿಸಿದೆ.
ರಾಜ್ಯ ಸರಕಾರವು ತನ್ನ ಮನವಿಯಲ್ಲಿ ಹೈಕೋರ್ಟ್ ಗೋಹತ್ಯೆ ನಿಷೇಧವನ್ನು ನಿರ್ದೇಶಿಸುವ ಮೂಲಕ ಕಾನೂನಿನ ಚೌಕಟ್ಟನ್ನು ಮೀರಿದೆ ಎಂದು ವಾದಿಸಿದೆ.
ಮೇ 27 ರಂದು ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ ಲಕ್ಷ್ಮೀನಾರಾಯಣ ಅವರ ವಿಭಾಗೀಯ ಪೀಠವು, ಗೊತ್ತುಪಡಿಸಿದ ಕಸಾಯಿಖಾನೆಗಳಲ್ಲಿ ಮಾತ್ರ ಪ್ರಾಣಿ ವಧೆಗೆ ಅವಕಾಶ ನೀಡಬೇಕು. ಬಕ್ರೀದ್ ಅಥವಾ ಇನ್ಯಾವುದೇ ದಿನದಲ್ಲಿ ಗೋಹತ್ಯೆ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿತ್ತು.
ಹಿಂದೂ ಮಕ್ಕಳ್ ಕಚ್ಚಿಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಆದೇಶವನ್ನು ನೀಡಿತ್ತು.
ಅರ್ಜಿದಾರರು, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡುವುದನ್ನು ತಡೆಯಲು ನಿರ್ದೇಶನಗಳನ್ನು ನೀಡಬೇಕೆಂದು ಕೋರಿದ್ದರು. ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದರು. ಆದರೆ, ಹೈಕೋರ್ಟ್ ಹಸುಗಳು ಮತ್ತು ಕರುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಆದೇಶವನ್ನು ಹೊರಡಿಸಿತ್ತು.
