ಬೆಂಗಳೂರು: ವಾಜರಹಳ್ಳಿಯಲ್ಲಿ 4 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ಬಕೆಟ್ ನೀರಲ್ಲಿ ಮುಳುಗಿಸಿ ಕೊಂದ ತಾಯಿ!

ಬೆಂಗಳೂರು : ವಾಜರಹಳ್ಳಿಯ ಬಿಸಿಸಿಎಚ್‌ಎಸ್ ಲೇಔಟ್‌ನ ಮನೆಯೊಂದರಲ್ಲಿ 4 ತಿಂಗಳ ಅವಳಿ ಹೆಣ್ಣು ಕಂದಮ್ಮಗಳನ್ನು ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ ತಾಯಿಯೊಬ್ಬಳು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಮಂಗಳವಾರ ನಡೆದಿದೆ.

ಕೃತ್ಯ ಎಸಗಿದ ಮಹಿಳೆಯನ್ನು ಉಮಾದೇವಿ (44) ಎಂದು ಗುರುತಿಸಲಾಗಿದೆ. ಅವರ ಪತಿ ರಾಮಲಿಂಗಪ್ಪ ನೀಡಿದ ದೂರಿನ ಆಧಾರದ ಮೇಲೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ರಾಮಲಿಂಗಪ್ಪ ಹಾಗೂ ಉಮಾದೇವಿ 2002ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದ ಹಿನ್ನೆಲೆಯಲ್ಲಿ ಕೃತಕ ಗರ್ಭಧಾರಣೆ (ಐವಿಎಫ್) ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ಫಲ ನೀಡಿ ಕಳೆದ ಮೇ 5ರಂದು ಉಮಾದೇವಿಯವರಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು.
ಮಕ್ಕಳ ಜನನದ ಬಳಿಕ ಉಮಾದೇವಿ ಅವರಲ್ಲಿ ತೀವ್ರ ಬದಲಾವಣೆ ಕಂಡುಬಂದಿತ್ತು. ಕಳೆದ ಕೆಲವು ದಿನಗಳಿಂದ ಅವರು ಮಕ್ಕಳ ಪಾಲನೆಯಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಅಲ್ಲದೆ ಮಕ್ಕಳನ್ನು ಆಶ್ರಮಕ್ಕೆ ಸೇರಿಸುವಂತೆ ಹೇಳುತ್ತಾ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದರು. ಇದರಿಂದ ಆತಂಕಗೊಂಡ ಪತಿ ರಾಮಲಿಂಗಪ್ಪ, ಅವರನ್ನು ನಿಮ್ಹಾನ್ಸ್ ಆಸ್ಪತ್ರೆಯ ಮನೋವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಹೆರಿಗೆಯ ನಂತರದ ಹಾರ್ಮೋನ್ ಅಸಮತೋಲನದಿಂದ (Postpartum Depression) ಉಮಾದೇವಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಮಂಗಳವಾರ ಮಧ್ಯಾಹ್ನ ಉಮಾದೇವಿ ಮನೆಯ ಕೊಠಡಿಯ ಬಾಗಿಲು ಹಾಕಿಕೊಂಡಿದ್ದರು. ಅನುಮಾನಗೊಂಡು ಮನೆಯವರು ಬಾಗಿಲು ತೆರೆದು ಪರಿಶೀಲಿಸಿದಾಗ, 4 ತಿಂಗಳ ಅವಳಿ ಮಕ್ಕಳು ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡುಬಂದಿದೆ. ಮತ್ತೊಂದೆಡೆ ಉಮಾದೇವಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.