ಬಜ್ಪೆ: ಕರಂಬಾರು ಬಳಿ ಕುಸಿದ ಕಿರುಸೇತುವೆ; ಮಂಗಳೂರು-ಕಟೀಲು ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್!

ಬಜ್ಪೆ : ಮಂಗಳೂರು-ಕಟೀಲು ಮುಖ್ಯರಸ್ತೆಯ ಕರಂಬಾರು ಬಳಿ ಮಳೆನೀರು ಹರಿದುಹೋಗಲು ನಿರ್ಮಿಸಲಾಗಿದ್ದ ಕಿರುಸೇತುವೆಯ ಒಂದು ಭಾಗ ದಿಢೀರ್ ಕುಸಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಕಟೀಲು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ರಸ್ತೆಯ ಭಾಗದಲ್ಲಿರುವ ಕಿರುಸೇತುವೆಯ ಅಡಿಭಾಗ ಕುಸಿದಿರುವುದನ್ನು ಮಂಗಳವಾರ ವಾಹನ ಸವಾರರು ಗಮನಿಸಿದ್ದಾರೆ. ತಕ್ಷಣವೇ ಜಾಗರೂಕರಾದ ಸಾರ್ವಜನಿಕರು ಈ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬಜ್ಪೆ ಠಾಣೆಯ ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ಅಪಾಯಕಾರಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಂದ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಲೋಕೋಪಯೋಗಿ (PWD) ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ. ಕರಂಬಾರು ಬಳಿ ಮುಖ್ಯರಸ್ತೆ ಬಂದ್ ಆಗಿರುವುದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾರರು ಹಾಗೂ ಕಟೀಲು ಧರ್ಮಸ್ಥಳಕ್ಕೆ ಪ್ರಯಾಣಿಸುವ ಭಕ್ತಾದಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ. ಸದ್ಯ ಈ ಮಾರ್ಗದಲ್ಲಿ ತೆರಳುವ ವಾಹನಗಳಿಗೆ ಪರ್ಯಾಯ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ.