Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆಯ ಜಾಹೀರಾತು: ಮೆಟಾ ಸಂಸ್ಥೆಗೆ ಕೇಂದ್ರ ಸರಕಾರದ ನೋಟಿಸ್!

Spread the love

ಹೊಸದಿಲ್ಲಿ: ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಅಕ್ರಮ ವಿಷಯಗಳ ಪ್ರಚಾರಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪಾವತಿಸಿದ ಜಾಹೀರಾತುಗಳನ್ನು ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮೆಟಾ ಸಂಸ್ಥೆಯಿಂದ ವಿವರಣೆ ಪಡೆಯಲು ಕೇಂದ್ರ ಸರಕಾರ ಮುಂದಾಗಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಕುರಿತು ಮೆಟಾದಿಂದ ಔಪಚಾರಿಕ ವಿವರಣೆ ಪಡೆಯುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ಇಂತಹ ಜಾಹೀರಾತುಗಳು ಇನ್‌ಸ್ಟಾಗ್ರಾಮ್‌ನ ಪರಿಶೀಲನಾ ವ್ಯವಸ್ಥೆಯನ್ನು ಹೇಗೆ ದಾಟಿದವು, ಅವುಗಳನ್ನು ಪ್ರಕಟಿಸುವ ಮೊದಲು ಯಾವ ರೀತಿಯ ತಪಾಸಣೆ ನಡೆಸಲಾಗಿತ್ತು ಹಾಗೂ ಅವುಗಳ ಬಗ್ಗೆ ಮಾಹಿತಿ ದೊರೆತ ನಂತರ ಯಾವ ಕ್ರಮಗಳನ್ನು ಕೈಗೊಳ್ಳಲಾಯಿತು ಎಂಬುದರ ಕುರಿತು ಮೆಟಾದಿಂದ ಸ್ಪಷ್ಟನೆ ಕೇಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಸಂಸ್ಥೆಯ ಜಾಹೀರಾತು ಪರಿಶೀಲನಾ ವ್ಯವಸ್ಥೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಜಾರಿಗೆ ತಂದಿರುವ ಸುರಕ್ಷತಾ ಕ್ರಮಗಳ ವಿವರಗಳನ್ನೂ ಕೋರಲಾಗುವುದು ಎಂದು ತಿಳಿಸಿದೆ.

ಬಿಬಿಸಿ ನಡೆಸಿದ ತನಿಖೆಯ ಪ್ರಕಾರ, ಭಾರತದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟವಾದ ಕೆಲವು ಪಾವತಿಸಿದ ಜಾಹೀರಾತುಗಳು, ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಅಕ್ರಮ ಚಿತ್ರಗಳು ಮತ್ತು ವಿಡಿಯೊಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾದ ಟೆಲಿಗ್ರಾಮ್ ಚಾನೆಲ್ಗಳಿಗೆ ಬಳಕೆದಾರರನ್ನು ಕರೆದೊಯ್ಯುವ ಲಿಂಕ್‌ಗಳನ್ನು ಹೊಂದಿದ್ದವು. ಭಾರತ ಮೂಲದ ಕೆಲವು ಖಾತೆಗಳಿಂದ ಈ ಜಾಹೀರಾತುಗಳು ಪ್ರಕಟವಾಗಿದ್ದು, ಇನ್‌ಸ್ಟಾಗ್ರಾಮ್‌ನ ವಿಷಯ ನಿಯಂತ್ರಣ ವ್ಯವಸ್ಥೆಯನ್ನು ದಾಟಿದ್ದವು ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೆಟಾ, ಹಲವು ಜಾಹೀರಾತುಗಳು ಮತ್ತು ಸಂಬಂಧಿತ ಖಾತೆಗಳನ್ನು ತೆಗೆದುಹಾಕಿರುವುದಾಗಿ ಹಾಗೂ ನಿಯಮ ಉಲ್ಲಂಘಿಸಿದ ವೆಬ್‌ವಿಳಾಸಗಳನ್ನು ನಿರ್ಬಂಧಿಸಿರುವುದಾಗಿ ತಿಳಿಸಿದೆ. ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಷಯವನ್ನು ಹುಡುಕುವುದು ಅಥವಾ ಹಂಚಿಕೊಳ್ಳುವುದರ ವಿರುದ್ಧ ಸಂಸ್ಥೆಯು ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅನುಸರಿಸುತ್ತಿದೆ ಎಂದು ಅದು ಸ್ಪಷ್ಟಪಡಿಸಿದೆ.
‘ಸುಧಾರಿತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಇಂತಹ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ, ವಿಶ್ವದಾದ್ಯಂತ ಸುಮಾರು 3.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವೇದಿಕೆಯಲ್ಲಿ ಕೆಲವರು ಪತ್ತೆ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ’ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

ಭಾರತದ ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳ ಪ್ರಕಾರ, ಮಧ್ಯವರ್ತಿ ಡಿಜಿಟಲ್ ವೇದಿಕೆಗಳು ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಷಯ ಸೇರಿದಂತೆ ಹಾನಿಕಾರಕ ವಿಷಯಗಳ ವಿರುದ್ಧ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಪೋಸ್ಟ್‌ಗಳಿಗಿಂತ ಭಿನ್ನವಾಗಿ, ಪಾವತಿಸಿದ ಜಾಹೀರಾತುಗಳು ಪ್ರಕಟವಾಗುವ ಮೊದಲು ಪರಿಶೀಲನೆಗೆ ಒಳಪಡಬೇಕು ಎಂದು ಸರಕಾರಿ ಮೂಲಗಳು ತಿಳಿಸಿವೆ.
‘ಸ್ವಂತ ನೀತಿಗಳು ಜಾರಿಯಲ್ಲಿದ್ದರೂ ಇಂತಹ ಪಾವತಿಸಿದ ಜಾಹೀರಾತುಗಳು ಹೇಗೆ ಪ್ರಕಟವಾದವು ಎಂಬುದನ್ನು ಮೆಟಾ ವಿವರಿಸಬೇಕಾಗಿದೆ’ ಎಂದು ಮೂಲವೊಂದು ತಿಳಿಸಿದೆ.
ಮಕ್ಕಳನ್ನು ಗುರಿಯಾಗಿಸಿಕೊಂಡ ಆನ್‌ಲೈನ್ ಅಪರಾಧಗಳು, ಅಶ್ಲೀಲ ವಿಷಯಗಳು, ಡೀಪ್‌ಫೇಕ್‌ಗಳು ಹಾಗೂ ಸೈಬ‌ರ್ ಮೂಲಕ ನಡೆಯುವ ದುರುಪಯೋಗಗಳ ವಿರುದ್ಧ ಡಿಜಿಟಲ್ ವೇದಿಕೆಗಳನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಲು ಕೇಂದ್ರ ಸರಕಾರ ಮುಂದಾಗಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಮಕ್ಕಳ ಶೋಷಣೆಯನ್ನು ತಡೆಯಲು ತನ್ನ ಸುರಕ್ಷತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಅಪರಾಧಿಗಳನ್ನು ಗುರುತಿಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು, ನಿಯಮ ಉಲ್ಲಂಘಿಸುವ ವೆಬ್‌ತಾಣಗಳ ಲಿಂಕ್‌ಗಳನ್ನು ನಿರ್ಬಂಧಿಸುವುದು ಹಾಗೂ ಇತರ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳುವ ಕಾರ್ಯವನ್ನು ಮುಂದುವರಿಸಲಾಗಿದೆ ಎಂದು ಮೆಟಾ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *