Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಸುಪ್ರೀಂ ಬ್ರೇಕ್: ಓಲಾ, ಉಬರ್, ರ‍್ಯಾಪಿಡೋಗೆ ಬಿಗ್ ರಿಲೀಫ್!

Spread the love

ನವದೆಹಲಿ: ಕರ್ನಾಟಕದಲ್ಲಿ(Karnataka) ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂಕೋರ್ಟ್ (Supreme Court) ಗ್ರೀನ್ ಸಿಗ್ನಲ್ ಸಿಗ್ನಲ್‌ ನೀಡಿದ್ದು ಹೈಕೋರ್ಟ್(High Court) ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಸುಪ್ರೀಂ ಆದೇಶದಿಂದ ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಹಾಗೂ ಲಕ್ಷಾಂತರ ಪ್ರಯಾಣಿಕರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದ್ದು, ರಾಜ್ಯ ಸರ್ಕಾರ ಮತ್ತು ಆಟೋ-ಟ್ಯಾಕ್ಸಿ(Auto Taxi) ಸಂಘಟನೆಗಳಿಗೆ ತೀವ್ರ ಹಿನ್ನಡೆಯಾಗಿದೆ.

ಇಂದು ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು, ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಹಾಗೂ ಬೈಕ್ ಟ್ಯಾಕ್ಸಿ ಬಳಸುವ ಯುವತಿಯರೊಂದಿಗೆ ತಾವು ನಡೆಸಿದ ಸಂಭಾಷಣೆಯನ್ನು ಸ್ಮರಿಸಿಕೊಂಡಿದ್ದಾರೆ.ನಾನು ಅವರಿಗೆ,”ನೀವು ಕಚೇರಿಗೆ ಹೇಗೆ ಬರುತ್ತೀರಿ” ಎಂದು ಕೇಳಿದೆ. “ಕ್ಯಾಬ್ ಬಾಡಿಗೆಗೆ ಪಡೆಯುವಷ್ಟು ಹಣವಿಲ್ಲದ ಕಾರಣ ಬೈಕ್ ಟ್ಯಾಕ್ಸಿಯಲ್ಲಿ ಬರುವುದಾಗಿ” ಅವರು ಹೇಳಿದರು. ಆಗ ನಾನು ಆಟೋದಲ್ಲಿ ಏಕೆ ಬರುವುದಿಲ್ಲ ಎಂದು ಕೇಳಿದಾಗ, “ಸರ್, ಆಟೋ ದರ ಐದು ಪಟ್ಟು ಹೆಚ್ಚಾಗಿರುತ್ತದೆ” ಎಂದು ಉತ್ತರಿಸಿದರು” ಎಂದು ನ್ಯಾಯಮೂರ್ತಿ ಶರ್ಮಾ ಅವರು ಬೈಕ್ ಟ್ಯಾಕ್ಸಿಗಳ ಕೈಗೆಟಕುವ ದರದ ಮಹತ್ವವನ್ನು ಉಲ್ಲೇಖಿಸಿದ್ದಾರೆರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಸೂಕ್ತ ನಿಯಮಾವಳಿ ರೂಪಿಸುವವರೆಗೆ ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಈ ಹಿಂದೆ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಓಲಾ, ಉಬರ್, ರ‍್ಯಾಪಿಡೋ, ಬೈಕ್ ಮಾಲೀಕರು ಹಾಗೂ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘ ಮೇಲ್ಮನವಿ ಸಲ್ಲಿಸಿದ್ದವು.

2026ರ ಜನವರಿ 23ರಂದು ತೀರ್ಪು ನೀಡಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು, ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿ, ಕಾಂಟ್ರಾಕ್ಟ್ ಕ್ಯಾರೇಜ್‌ಗಳಾಗಿ (Contract Carriages) ಓಡಿಸಬಹುದು. ಸರ್ಕಾರ ನಿಯಂತ್ರಣಾ ಷರತ್ತುಗಳನ್ನು ವಿಧಿಸಬಹುದೇ ಹೊರತು, ಕೇವಲ ದ್ವಿಚಕ್ರ ವಾಹನ ಎಂಬ ಕಾರಣಕ್ಕೆ ಪರವಾನಗಿ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿತ್ತು.ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕರ್ನಾಟಕ ಸರ್ಕಾರ, ಪ್ರಯಾಣಿಕರ ಸುರಕ್ಷತೆ, ವಿಮಾ ಸೌಲಭ್ಯದ ಕೊರತೆ ಹಾಗೂ 2019ರ ತಜ್ಞರ ಸಮಿತಿಯ ವರದಿಯನ್ನು ಉಲ್ಲೇಖಿಸಿತ್ತು. ರಾಜ್ಯದ ಇತರೆಡೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸಬಹುದಾದರೂ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಕಾರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಪೂರಕವಾಗಿ ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳೂ ಮೇಲ್ಮನವಿ ಸಲ್ಲಿಸಿದ್ದವು.

ವಿಚಾರಣೆ ವೇಳೆ, ಕಾರುಗಳಿಗೆ ಹೋಲಿಸಿದರೆ ಬೈಕ್‌ಗಳು ರಸ್ತೆಯಲ್ಲಿ ಕಡಿಮೆ ಜಾಗವನ್ನು ಆಕ್ರಮಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂಕೋರ್ಟ್, ಬೈಕ್ ಟ್ಯಾಕ್ಸಿಗಳ ಅಗ್ಗದ ದರವನ್ನು ಗಮನಕ್ಕೆ ತೆಗೆದುಕೊಂಡಿತ್ತು. ರಾಜ್ಯದಲ್ಲಿ ಸುಮಾರು 4.5 ಲಕ್ಷ ಪ್ರಯಾಣಿಕರು ಬೈಕ್ ಟ್ಯಾಕ್ಸಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅಗ್ರಿಗೇಟರ್‌ಗಳ ಪರ ವಕೀಲರು ವಾದಿಸಿದ್ದರು. ಅಲ್ಲದೆ, 2004 ಮತ್ತು 2024ರ ಕೇಂದ್ರ ಸರ್ಕಾರದ ಅಧಿಸೂಚನೆಗಳ ಪ್ರಕಾರ ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರವೂ ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿತ್ತು.ಎಲ್ಲಾ ವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ಇಂದು ಕರ್ನಾಟಕ ಸರ್ಕಾರ ಮತ್ತು ಆಟೋ ಸಂಘಟನೆಗಳ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಸುಗಮ ಸಂಚಾರಕ್ಕೆ ಹಾದಿ ಸುಗಮಗೊಳಿಸಿದೆ.

ಕರ್ನಾಟಕ ರಾಜ್ಯದ ಪರವಾಗಿ ಹಿರಿಯ ವಕೀಲರಾದ ವಿಕಾಸ್ ಸಿಂಗ್ ಮತ್ತು ಪರಾಗ್ ತ್ರಿಪಾಠಿ ವಾದ ಮಂಡಿಸಿದ್ದರೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಉಬರ್ ಪರವಾಗಿ ವಾದ ಮಂಡಿಸಿದರು. ಟ್ರೈಲೀಗಲ್‌ನ ವಕೀಲರಾದ ಅನುಜ್ ಬೆರ್ರಿ, ಅನುಷಾ ರಮೇಶ್, ಉತ್ಕರ್ಷ್ ಶ್ರೀವಾಸ್ತವ ಮತ್ತು ಅಥರ್ವ ಕೊಪ್ಪಳ ಅವರನ್ನು ಒಳಗೊಂಡ ತಂಡವು ಉಬರ್ ಪರವಾಗಿ ವಾದ ಮಂಡಿಸಿದರು.

ಓಲಾವನ್ನು ಅದರ ಪಾಲುದಾರ ಫೈಸಲ್ ನೇತೃತ್ವದ ಲುಥ್ರಾ ಮತ್ತು ಲುಥ್ರಾ ತಂಡವು ಪ್ರತಿನಿಧಿಸಿತು. ಕರ್ನಾಟಕ ಸರ್ಕಾರವನ್ನು ಬೆಂಬಲಿಸುವ ಆಟೋ ಯೂನಿಯನ್‌ಗಳು ಮತ್ತು ಚಾಲಕರನ್ನು ವಕೀಲ ಕೆ ಶಿವ ಪ್ರತಿನಿಧಿಸಿದರು.


Spread the love
Share:

administrator

Leave a Reply

Your email address will not be published. Required fields are marked *