ಮಗನ ಶವದ ಮುಂದೆಯೇ ಮೂರು ದಿನ ತಾಯಿಯ ನರಳಾಟ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣ!

ಬೆಂಗಳೂರು: ಮಲತಂದೆಯೊಬ್ಬ ತನ್ನ ಮಗನನ್ನೇ ಬರ್ಬರವಾಗಿ ಕೊಲೆ ಮಾಡಿ, ಗಾಯಗೊಂಡಿದ್ದ ಪತ್ನಿಯನ್ನು ಮನೆಯೊಳಗೆ ಕೂಡಿ ಹಾಕಿ ಪರಾರಿಯಾಗಿರುವ ಘಟನೆ ಪದ್ಮನಾಭನಗರದಲ್ಲಿ (Bengaluru Crime) ನಡೆದಿದೆ.

ಇತ್ತ ಮಗನ ಶವದ ಮುಂದೆಯೇ ತಾಯಿ ಬರೋಬ್ಬರಿ ಮೂರು ದಿನಗಳ ಕಾಲ ನರಳಾಡಿದ್ದಾಳೆ.
ಸುದೀಪ್ ಕೊಲೆಗೈದ ವ್ಯಕ್ತಿ. ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿರುವ ಎಸ್.ಎಸ್.ಆರ್.ಕೆ ತುಳಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ ಈ ಭೀಕರ ಕೃತ್ಯ ನಡೆದಿದೆ. ಆರೋಪಿ ಸುದೀಪ್, ತನ್ನ ಪತ್ನಿ ಸೀಮಾ ದಾಸ್ ಮತ್ತು ಆಕೆಯ ಮಗ ಸೋಹಮ್ ಜೊತೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಬಾಡಿಗೆಗೆ ವಾಸವಿದ್ದ.
ಕಳೆದ ಆರು ತಿಂಗಳಿನಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ನವೆಂಬರ್ 16ರ ರಾತ್ರಿ ಮನೆಯಲ್ಲಿ ಮತ್ತೆ ಜೋರಾಗಿ ಜಗಳ ಶುರುವಾಗಿದೆ. ಸ್ವಲ್ಪ ಹೊತ್ತಿನ ನಂತರ ಗಲಾಟೆ ತಣ್ಣಗಾಗಿದ್ದರಿಂದ, ಮಾಮೂಲಿ ಜಗಳವಿರಬೇಕು ಅಂತ ನೆರೆಹೊರೆಯವರು ಮತ್ತು ಮಾಲೀಕರು ಸುಮ್ಮನಾಗಿದ್ದರು. ಆದರೆ ಆ ರಾತ್ರಿ ಸುದೀಪ್ ಪತ್ನಿ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ
ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಮಗ ಸೋಹಮ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಗಾಯಗೊಂಡಿದ್ದ ಪತ್ನಿ ಸೀಮಾಳನ್ನು ರೂಂನಲ್ಲಿ ಕೂಡಿ ಹಾಕಿ, ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾನೆ.
ಮೂರು ದಿನಗಳಾದರೂ ಸೀಮಾ ಆಗಲಿ, ಮಗನಾಗಲಿ ಮನೆಯಿಂದ ಹೊರಗೆ ಬಾರದಿದ್ದನ್ನು ಕಂಡು ಅನುಮಾನಗೊಂಡ ಪಕ್ಕದ ಮನೆಯವರು, ನಿನ್ನೆ ಮಾಲೀಕ ಮಲ್ಲಯ್ಯ ಅವರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಸ್ಥಳಕ್ಕೆ ಬಂದ ಪೊಲೀಸರು ಕೀ ಮೇಕರ್ ಕರೆಸಿ ಬೀಗ ತೆಗೆಸಿದಾಗ, ರೂಂ ಒಳಗಿನಿಂದ ಸೀಮಾ ದಾಸ್ ಕೂಗುತ್ತಿದ್ದ ಶಬ್ದ ಕೇಳಿಸಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಹಾಲ್‌ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಬಾತ್‌ರೂಂನಲ್ಲಿ ಮಗ ಸೋಹಮ್ ಮೃತದೇಹ ಪತ್ತೆಯಾಗಿದೆ. ಮೂರು ದಿನಗಳಿಂದ ಅನ್ನ-ನೀರಿಲ್ಲದೆ, ಕಣ್ಣಮುಂದೆಯೇ ಮಗನ ಶವ ನೋಡುತ್ತಾ ತಾಯಿ ನರಳಾಡಿದ್ದಾರೆ.
ಸದ್ಯ ಅಪಾರ್ಟ್‌ಮೆಂಟ್ ಮಾಲೀಕ ಮಲ್ಲಯ್ಯ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿದ್ದ ಹಂತಕ ಸುದೀಪ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.