ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್: ಚಿಕಿತ್ಸೆಗಾಗಿ ನ್ಯಾಯಾಲಯದ ಮೊರೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಪ್ರಮುಖ ಆರೋಪಿಯಾಗಿರುವ ನಟ ದರ್ಶನ್(Darshan) ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಜೈಲಿನಲ್ಲಿ ಫಿಸಿಯೋಥೆರಪಿ(Physiotherapy) ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿ ಅವರ ಪರ ವಕೀಲರು 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನಿನ್ನೆಯಷ್ಟೇ ವಿಚಾರಣೆ ವೇಳೆ ಖುದ್ದು ನಟ ದರ್ಶನ್ ಅವರೇ ನ್ಯಾಯಾಧೀಶರ ಮುಂದೆ ತಮ್ಮ ಬೆನ್ನುನೋವಿನ ಸಮಸ್ಯೆಯನ್ನು ತೋಡಿಕೊಂಡು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಾಧೀಶರು, ವಕೀಲರ ಮೂಲಕ ಅಧಿಕೃತವಾಗಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ನ್ಯಾಯಾಲಯದ ಸೂಚನೆಯ ಮೇರೆಗೆ ದರ್ಶನ್ ಪರ ವಕೀಲರು ಇಂದು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ ದರ್ಶನ್ ತಮ್ಮ ಆರೋಗ್ಯ ಸಮಸ್ಯೆಯ ಕುರಿತು ವಿವರಣೆ ನೀಡಿದ್ದು, “ಕಳೆದ 12 ವರ್ಷಗಳಿಂದ ಬೆನ್ನುನೋವಿನ ಸಮಸ್ಯೆಯಿಂದ ನರಳುತ್ತಿದ್ದೇನೆ. ನನ್ನ ಬೆನ್ನುಹುರಿಯ ಎಲ್4 ಹಾಗೂ ಎಲ್5 ಭಾಗದಲ್ಲಿ ಗಂಭೀರ ಸಮಸ್ಯೆ ಇದೆ. ಈ ನೋವಿನ ನಿವಾರಣೆಗೆ ಈ ಹಿಂದೆ ಸ್ಟೀರಾಯ್ಡ್ ಇಂಜೆಕ್ಷನ್‌ಗಳನ್ನೂ ಪಡೆದುಕೊಂಡಿದ್ದೇನೆ. ವಿಶೇಷವಾಗಿ ಚಳಿಗಾಲ ಆರಂಭವಾದರೆ ಈ ನೋವು ಮಿತಿಮೀರುತ್ತದೆ. ಕಳೆದ ಒಂದು ತಿಂಗಳಿಂದ ನೋವು ವಿಪರೀತವಾಗಿದ್ದು, ಸರಿಯಾಗಿ ಕುಳಿತುಕೊಳ್ಳಲು, ನಿಲ್ಲಲು ಹಾಗೂ ರಾತ್ರಿ ವೇಳೆ ಮಲಗಲೂ ಸಾಧ್ಯವಾಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.ಫಿಸಿಯೋಥೆರಪಿ ಚಿಕಿತ್ಸೆಗೆ ಅವಕಾಶ ಕಲ್ಪಿಸುವಂತೆ ಒಂದು ತಿಂಗಳ ಹಿಂದೆಯೇ ಜೈಲು ಅಧೀಕ್ಷಕರಿಗೆ (ಸೂಪರಿಂಟೆಂಡೆಂಟ್) ಮನವಿ ಪತ್ರ ಸಲ್ಲಿಸಿದ್ದೆ. ಆದಾಗ್ಯೂ ಜೈಲು ಅಧಿಕಾರಿಗಳು ಯಾವುದೇ ವೈದ್ಯಕೀಯ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ತಮಗೆ ಸೂಕ್ತ ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,” ಎಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.