ಸಾಲ ತೀರಿಸಿದರೂ ಬಿಡದ ಸೈಬರ್ ವಂಚಕರು: ಫೋಟೋ ಮಾರ್ಫ್ ಮಾಡುವ ಬೆದರಿಕೆಯೊಡ್ಡಿ ಮಹಿಳೆಗೆ ₹2.90 ಲಕ್ಷ ವಂಚನೆ!

ಮಂಗಳೂರು : ಆನ್‌ಲೈನ್ ಲೋನ್ ಆಪ್‌ಗಳ ಮೂಲಕ ತುರ್ತು ಸಾಲ ಪಡೆದು, ಪಡೆದ ಹಣವನ್ನೆಲ್ಲಾ ಬಡ್ಡಿ ಸಮೇತ ಪೂರ್ಣವಾಗಿ ಪಾವತಿಸಿ ಕ್ಲಿಯರ್ ಮಾಡಿದರೂ ಸಹ, ಮಹಿಳೆಯ ಫೋಟೋ ಮಾರ್ಫ್ ಮಾಡಿ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆಯೊಡ್ಡಿ ಬರೋಬ್ಬರಿ ₹2.90 ಲಕ್ಷಕ್ಕೂ ಅಧಿಕ ಹಣವನ್ನು ಎಗರಿಸಿ ವಂಚಿಸಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ 37 ವರ್ಷದ ಮಹಿಳೆ ನೀಡಿದ ದೂರಿನನ್ವಯ ಸಿಇಎನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರುದಾರ ಮಹಿಳೆಗೆ ವೈಯಕ್ತಿಕ ಕಾರಣಗಳಿಂದ ಹಣದ ಅವಶ್ಯಕತೆ ಇದ್ದಿದ್ದರಿಂದ, ಮೇ 2026ರಲ್ಲಿ ಗೂಗಲ್‌ನಲ್ಲಿ ಸಾಲದ ಆಪ್‌ಗಳ ಬಗ್ಗೆ ಹುಡುಕಾಟ ನಡೆಸಿದ್ದರು. ಈ ವೇಳೆ ‘Prefer App’, ‘Credit App’ ಹಾಗೂ ‘Flexy b’ ಎಂಬ ಆನ್‌ಲೈನ್ ಲೋನ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ವೈಯಕ್ತಿಕ ದಾಖಲೆ ಹಾಗೂ ವಿಳಾಸಗಳನ್ನು ನಮೂದಿಸಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಮೇ 22, 2026ರಂದು ಮಹಿಳೆಯ ಎಸ್‌ಬಿಐ (SBI) ಖಾತೆಗೆ ₹50,000 ಹಾಗೂ ಕೆನರಾ ಬ್ಯಾಂಕ್ ಖಾತೆಗೆ ₹1,50,000 ಸೇರಿದಂತೆ ಒಟ್ಟು ₹2,00,000 ಸಾಲದ ಹಣ ಜಮೆಯಾಗಿತ್ತು.

ಮಹಿಳೆಯು ಸುಮಾರು 3 ತಿಂಗಳುಗಳ ಕಾಲ ಮಾಸಿಕ ₹13,300 ಕಂತುಗಳನ್ನು ಪಾವತಿಸಿದ್ದರು. ಬಳಿಕ ಅಕ್ಟೋಬರ್ ತಿಂಗಳಲ್ಲಿ ಇಡೀ ಬಾಕಿ ಸಾಲವನ್ನು ಬಡ್ಡಿ ಸಮೇತ ಒಟ್ಟಿಗೆ ₹2,15,000 ಪಾವತಿಸಿ ಆಪ್‌ಗಳಲ್ಲಿ ಸಾಲವನ್ನು ಪೂರ್ಣವಾಗಿ ಕ್ಲಿಯರ್ ಮಾಡಿದ್ದರು. ಆದರೆ, ಸಾಲ ಕ್ಲಿಯರ್ ಆದ ಬಳಿಕ ಅಪರಿಚಿತ ವಂಚಕರು ಮಹಿಳೆಯ ಎಸ್‌ಬಿಐ ಖಾತೆಗೆ ಅವರ ಅನುಮತಿಯಿಲ್ಲದೆ ಹಂತ ಹಂತವಾಗಿ ₹5,000, ₹10,000 ಹಾಗೂ ₹30,000 ಹಣವನ್ನು ಬಲವಂತವಾಗಿ ಜಮೆ ಮಾಡಿದ್ದಾರೆ. ತಕ್ಷಣವೇ ‘8031462813’, ‘8216567489’ ಹಾಗೂ ‘+911600303452’ ಸಂಖ್ಯೆಗಳಿಂದ ಕರೆ ಮಾಡಿದ ಸೈಬರ್ ಅಪರಾಧಿಗಳು, “ನಿಮ್ಮ ಖಾತೆಗೆ ಹಣ ಜಮೆ ಮಾಡಲಾಗಿದೆ. ಅದಕ್ಕೆ ಭಾರೀ ಬಡ್ಡಿ ಸೇರಿಸಿ ಮರುಪಾವತಿಸಬೇಕು. ಇಲ್ಲವಾದರೆ ನಿಮ್ಮ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ (Morph) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನಿಮ್ಮ ಕುಟುಂಬಸ್ಥರಿಗೆ ಕಳುಹಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.
ಅಪರಿಚಿತರ ಬೆದರಿಕೆಯಿಂದ ತೀವ್ರ ಭೀತಿಗೆ ಒಳಗಾದ ಮಹಿಳೆ, ವಂಚಕರು ಕಳುಹಿಸಿದ ಪೇಮೆಂಟ್ ಲಿಂಕ್‌ಗಳಿಗೆ ಜುಲೈ 23, 2026 ರಿಂದ ಅಕ್ಟೋಬರ್ 02, 2026 ರ ನಡುವಿನ ಅವಧಿಯಲ್ಲಿ ತಮ್ಮ ಎಸ್‌ಬಿಐ ಖಾತೆಯಿಂದ ₹2,35,994 ಹಾಗೂ ಕೆನರಾ ಬ್ಯಾಂಕ್ ಖಾತೆಯಿಂದ ₹54,582 ಸೇರಿದಂತೆ ಒಟ್ಟು ₹2,90,576 (ಎರಡು ಲಕ್ಷದ ತೊಂಬತ್ತು ಸಾವಿರದ ಐನೂರು ಎಪ್ಪತ್ತಾರು ರೂಪಾಯಿ) ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಮೋಸ ಹೋಗಿದ್ದಾರೆ. ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವುದು ಅರಿವಿಗೆ ಬಂದ ತಕ್ಷಣವೇ ಮಹಿಳೆ ಮಂಗಳೂರು ಸಿಇಎನ್ (CEN) ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act 2000) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS 2023) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕರೆ ಬಂದ ನಂಬರ್‌ಗಳು ಹಾಗೂ ಬ್ಯಾಂಕ್ ಖಾತೆಗಳ ಆಧರಿಸಿ ತನಿಖೆ ತೀವ್ರಗೊಳಿಸಿದ್ದಾರೆ.