15 ವರ್ಷದ ಬಾಲಕಿಯೊಂದಿಗೆ ಅಸಭ್ಯ ವರ್ತನೆ ಆರೋಪ: ಬಿಜೆಪಿ ಮುಖಂಡನ ವಿರುದ್ಧ ಪೋಕ್ಸೋ ಪ್ರಕರಣ!

ಇಂದೋರ್: ಇಂದೋರ್ನಲ್ಲಿ ನಡೆದ ಗರ್ಭಾ ಕಾರ್ಯಕ್ರಮವೊಂದರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಇಂದೋರ್ನ ವಿಧಾನಸಭಾ ಕ್ಷೇತ್ರ ಸಂಖ್ಯೆ 2 ರ ಬಿಜೆಪಿ ಮಂಡಲ ಅಧ್ಯಕ್ಷರಾಗಿರುವ ಆರೋಪಿ ಕಮಲ್ ಚೌಹಾಣ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಆದಾಗ್ಯೂ, ಪಕ್ಷವು ಅವರಿಗೆ ಸ್ಪಷ್ಟಿಕರಣ ಕೋರಿ ನೋಟಿಸ್ ಜಾರಿ ಮಾಡಿದೆ.
ಹೀರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 15ರಂದು ಈ ಘಟನೆ ನಡೆದಿದೆ ಎಂದು ಸಹಾಯಕ ಪೊಲೀಸ್ ಕಮಿಷನರ್ ರುಬಿನಾ ಮಿಜ್ಞಾನಿ ತಿಳಿಸಿದ್ದಾರೆ.
15 ವರ್ಷದ ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 74 (ಮಹಿಳೆಯ ಘನತೆಯನ್ನು ಕೆರಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 75 (ಲೈಂಗಿಕ ಕಿರುಕುಳ) ಅಡಿಯಲ್ಲಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸ್) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಘಟನೆಯ ವೀಡಿಯೊದಲ್ಲಿ, ಚೌಹಾಣ್ ಯಾವುದೋ ವಿಷಯಕ್ಕೆ ಸಿಟ್ಟುಗೊಂಡು ಬಾಲಕಿಯನ್ನು ತಳ್ಳಿದ ನಂತರ ಆಕೆಯ ಬಳಿಗೆ ಹೋಗುತ್ತಿರುವುದನ್ನು ತೋರಿಸಲಾಗಿದೆ.
ಆಡಳಿತ ಪಕ್ಷದ ಇಂದೋರ್ ಘಟಕದ ಅಧ್ಯಕ್ಷ ಸುಮಿತ್ ಮಿಶ್ರಾ, ಚೌಹಾಣ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಅವರ ನಡವಳಿಕೆಯು ಪಕ್ಷದ ಸಿದ್ಧಾಂತ ಮತ್ತು ಅವರ ಸ್ಥಾನದ ಜವಾಬ್ದಾರಿಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಮೂರು ದಿನಗಳಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ವಿಫಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.