ಕಾಸರಗೋಡು: ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಕ್ಕೆ ಢಿಕ್ಕಿ – ಚಾಲಕ ಗಂಭೀರ!

ಕಾಸರಗೋಡು: ಮೃತದೇಹವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದು ಬಳಿಕ ಕೇರಳ ಹೊರೆ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿಯ ಕಬ್ಬಿಣದ ಗ್ರಿಲ್‌ಗೆ ಬಡಿದ ಘಟನೆ ಬುಧವಾರ ಕಾಸರಗೋಡು ನಗರದಲ್ಲಿ ನಡೆದಿದೆ.ಕಾಸರಗೋಡು ನಗರದ ಎಂ.ಜಿ. ರಸ್ತೆಯ ಮುಂಭಾಗದಲ್ಲಿ ಅಪಘಾತ ಸಂಭವಿಸಿದೆ. ಮೃತದೇಹವನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಹಠಾತ್ತನೆ ಎದುರು ಬಂದ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಅಡ್ಕತ್ ಬೈಲ್ ನಿವಾಸಿ ಎಂ.ಎ. ಅಬ್ದುಲ್ಲಾ ಕುಂಞಿ ಎಂದು ಗುರುತಿಸಲಾಗಿದೆ. ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ರಸ್ತೆ ಬದಿಯಲ್ಲಿದ್ದ ಕೇರಳ ಹೊರೆ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿಯ ಕಬ್ಬಿಣದ ಗ್ರಿಲ್‌ಗೆ ಬಡಿದು ನಿಂತಿದೆ. ಅಪಘಾತದಿಂದ ಆಂಬ್ಯುಲೆನ್ಸ್‌ನ ಮುಂಭಾಗ, ಆಟೋರಿಕ್ಷಾ ಹಾಗೂ ಕಲ್ಯಾಣ ಮಂಡಳಿ ಕಚೇರಿಯ ಗ್ರಿಲ್‌ಗೆ ಹಾನಿಯಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
