ಮಂಗಳೂರು: ಪರಶುರಾಮ್ ಎಕ್ಸ್‌ಪ್ರೆಸ್‌ಗೆ ಆಧುನಿಕ LHB ಕೋಚ್‌ಗಳ ಸ್ಪರ್ಶ – ಸಾಮಾನ್ಯ ಪ್ರಯಾಣಿಕರಿಗೆ ಬಗ್ಗುಬಡಿದ ನಿರಾಶೆ!

ಮಂಗಳೂರು: ಕರಾವಳಿ ಕರ್ನಾಟಕ ಹಾಗೂ ಕೇರಳದ ನಿತ್ಯ ಪ್ರಯಾಣಿಕರ ಅತ್ಯಂತ ನೆಚ್ಚಿನ ರೈಲಾಗಿರುವ ಮಂಗಳೂರು central – ಕನ್ಯಾಕುಮಾರಿ ‘ಪರಶುರಾಮ್ ಎಕ್ಸ್‌ಪ್ರೆಸ್’ (ರೈಲು ಸಂಖ್ಯೆ 16649/16650) ಇಂದಿನಿಂದ (ಸೆಪ್ಟೆಂಬರ್ 23) ಆಧುನಿಕ ಎಲ್‌ಎಚ್‌ಬಿ (LHB – Linke Hofmann Busch) ಕೋಚ್‌ಗಳಿಗೆ ಬದಲಾಗುತ್ತಿದೆ. ಈವರೆಗೆ ಸಾಂಪ್ರದಾಯಿಕ ಐಸಿಎಫ್ (ICF) ಕೋಚ್‌ಗಳೊಂದಿಗೆ ಸಂಚರಿಸುತ್ತಿದ್ದ ಈ ರೈಲಿಗೆ ಈಗ ಸುರಕ್ಷಿತ ಹಾಗೂ ವೇಗದ ಹೊಸ ಬೋಗಿಗಳನ್ನು ಅಳವಡಿಸಲಾಗಿದೆ.

ನೂತನ ಎಲ್‌ಎಚ್‌ಬಿ ರೇಕ್‌ನಲ್ಲಿ 22 ಕೋಚ್ ಗಳು ಇರಲಿದ್ದು, ಅದರಲ್ಲಿ 2 ಎಸಿ ಚೇರ್ ಕಾರ್‌ಗಳು, 9 ಸೆಕೆಂಡ್ ಸಿಟ್ಟಿಂಗ್ (ಕಾಯ್ದಿರಿಸಿದ) ಕೋಚ್‌ಗಳು, 9 ಜನರಲ್ ಸೆಕೆಂಡ್ ಕ್ಲಾಸ್ (ಸಾಮಾನ್ಯ) ಕೋಚ್‌ಗಳು ಹಾಗೂ 1 ಲಗೇಜ್-ಕಮ್-ಬ್ರೇಕ್ ವ್ಯಾನ್ ಇರಲಿವೆ. ರೈಲಿನ ಸುರಕ್ಷತೆ ಹಾಗೂ ವೇಗ ಹೆಚ್ಚಾಗಿದ್ದರೂ, ದೈನಂದಿನ ಸಾಮಾನ್ಯ (General Unreserved) ಪ್ರಯಾಣಿಕರಿಗೆ ಇದು ದೊಡ್ಡ ಹೊಡೆತ ನೀಡಿದೆ. ಈ ಹಿಂದೆ ಇದ್ದ 16 ಸಾಮಾನ್ಯ ಬೋಗಿಗಳಲ್ಲಿ ಪ್ರತಿ ಕೋಚ್‌ಗೆ 105 ರಂತೆ ಒಟ್ಟು 1,680 ಸೀಟುಗಳು ಲಭ್ಯವಿದ್ದವು. ಆದರೆ, ಹೊಸ LHB ವ್ಯವಸ್ಥೆಯಲ್ಲಿ ಜನರಲ್ ಕೋಚ್‌ಗಳ ಸಂಖ್ಯೆಯನ್ನು 16 ರಿಂದ 9 ಕ್ಕೆ ಇಳಿಸಲಾಗಿದೆ.
ಪ್ರಸ್ತುತ 9 ಎಲ್‌ಎಚ್‌ಬಿ ಜನರಲ್ ಕೋಚ್‌ಗಳಲ್ಲಿ (ಪ್ರತಿ ಕೋಚ್‌ಗೆ 108 ಸೀಟುಗಳಂತೆ) ಒಟ್ಟು 970 ಸೀಟುಗಳು ಮಾತ್ರ ಸಿಗಲಿವೆ. ಇದರಿಂದಾಗಿ ದೈನಂದಿನ ಸಾಮಾನ್ಯ ಪ್ರಯಾಣಿಕರಿಗೆ ನೇರವಾಗಿ ಬರೋಬ್ಬರಿ 710 ಸೀಟುಗಳ ಕೊರತೆ ಎದುರಾಗಲಿದೆ. ಇನ್ನೊಂದೆಡೆ ಕಾಯ್ದಿರಿಸಿದ (Second Sitting) ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಈ ಹಿಂದೆ ಇದ್ದ 3 ಕೋಚ್‌ಗಳ (315 ಸೀಟುಗಳು) ಬದಲಾಗಿ ಈಗ 9 ಎಲ್‌ಎಚ್‌ಬಿ ಸಿಟ್ಟಿಂಗ್ ಕೋಚ್‌ಗಳಲ್ಲಿ ಒಟ್ಟು 970 ರಿಸರ್ವ್ಡ್ ಸೀಟುಗಳು ಲಭ್ಯವಾಗಲಿವೆ.