ಉಡುಪಿ: ಕಟಪಾಡಿ ಕೋಟೆ ಬಳಿ ಬಾವಿಗೆ ಬಿದ್ದಿದ್ದ ನವಿಲು ರಕ್ಷಣೆ – ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ!

ಉಡುಪಿ: ಬಾವಿಗೆ ಬಿದ್ದಿದ್ದ ನವಿಲೊಂದನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಿಸಿದ ಘಟನೆ ಕಟಪಾಡಿ ಕೋಟೆ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿದೆ.ಕಟಪಾಡಿ ಕೋಟೆ ಸಮೀಪದ ಬಾವಿಗೆ ನವಿಲು ಬಿದ್ದಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಮಹಾಬಲೇಶ್ವರ ಅವರು ಬಾವಿಗೆ ಇಳಿದು ನವಿಲನ್ನು ಸುರಕ್ಷಿತವಾಗಿ ಹಿಡಿದು ಮೇಲಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಗ್ನಿಶಾಮಕ ಸಿಬ್ಬಂದಿಗಳಾದ ಅಶ್ವಿನ್ ಸುನಿಲ್, ಮಹಾಬಲೇಶ್ವರ, ನಾಗೇಶ್ ಪೂಜಾರಿ, ಸುಧೀರ್, ಅಮರ್ ಹಾಗೂ ಗಣೇಶ್ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಿಬ್ಬಂದಿಯ ಸಮಯೋಚಿತ ಸ್ಪಂದನೆ, ಸಮನ್ವಯ ಮತ್ತು ಧೈರ್ಯಶಾಲಿ ಪ್ರಯತ್ನದಿಂದ ನವಿಲಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಬಾವಿಯಿಂದ ಹೊರತೆಗೆಯಲಾಯಿತು. ಜನರ ಜೀವಗಳ ರಕ್ಷಣೆಯ ಜೊತೆಗೆ ಪ್ರಾಣಿ-ಪಕ್ಷಿಗಳ ಜೀವ ರಕ್ಷಣೆಯಲ್ಲೂ ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತೋರಿದ ಕಾಳಜಿ ಹಾಗೂ ಸೇವಾ ಮನೋಭಾವಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
