ರಿಯಾದ್: ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿ ತೀವ್ರ – ಸೇನಾ ನೆಲೆ ಗುರಿ!

ರಿಯಾದ್ ಸೆಪ್ಟೆಂಬರ್ 14: ಸೌದಿ ಅರೇಬಿಯಾದ ಮೇಲೆ ಇರಾನ್ ಬೆಂಬಲಿತ ಹೌತಿ (Houthi) ಬಂಡುಕೋರರ ದಾಳಿ ತೀವ್ರಗೊಂಡಿದ್ದು, ದೇಶದ ದಕ್ಷಿಣ ಭಾಗವನ್ನು ಗುರಿಯಾಗಿಸಿಕೊಂಡು ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಲಾಗಿದೆ. ಹೌತಿಗಳ ದಾಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ಸೌದಿಯ ಖಮೀಸ್ ಮುಶೈತ್ ಹಾಗೂ ಅಬ್ಹಾ ಪ್ರದೇಶಗಳಲ್ಲಿ ಸಿವಿಲ್ ಡಿಫೆನ್ಸ್ ಇಲಾಖೆ ಎಚ್ಚರಿಕೆ ರವಾನಿಸಿದೆ ಎಂದು ‘ಅಲ್ ಜಜೀರಾ’ ವರದಿ ಮಾಡಿದೆ.ಜುಲೈನಲ್ಲಿ ಸೌದಿ ಅರೇಬಿಯಾ ವಿರುದ್ಧ ನೌಕಾ ದಿಗ್ಬಂಧನ ಘೋಷಿಸಿದ್ದ ಹೌತಿಗಳು, ಕೆಂಪು ಸಮುದ್ರದಲ್ಲಿ ಸಂಚರಿಸುವ ಸೌದಿ ತೈಲ ನೌಕೆಗಳನ್ನೂ ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದ್ದಾರೆ.
ಸೌದಿ ಅರೇಬಿಯಾದ ಶರೂರಾ ಪ್ರದೇಶದಲ್ಲಿರುವ ಸೇನಾ ನೆಲೆಯ ಶಸ್ತ್ರಾಸ್ತ್ರ ಸಂಗ್ರಹಾಗಾರಗಳು ಹಾಗೂ ಕಮಾಂಡ್ ಸೆಂಟರ್ಗಳ ಮೇಲೆ ದಾಳಿ ನಡೆಸಿರುವುದಾಗಿ ಹೌತಿ ವಕ್ತಾರ ಯಾಹ್ಯಾ ಸರಿ ‘ಎಕ್ಸ್’ (Twitter) ಖಾತೆಯಲ್ಲಿ ತಿಳಿಸಿದ್ದಾರೆ. ಗಡಿ ಭಾಗದಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಹೌತಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಇಳಿಯುವಂತೆ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದರು, ಆದರೆ ಟ್ರಂಪ್ ಈ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ‘ಸಿಬಿಎಸ್ ನ್ಯೂಸ್’ ವರದಿ ಮಾಡಿದೆ. ದಾಳಿಗಳ ಪರಿಣಾಮವಾಗಿ ಯೆಮೆನ್ನ ಪಶ್ಚಿಮ ಕರಾವಳಿ ಭಾಗದಲ್ಲಿ ವೈದ್ಯಕೀಯ ಸೇವೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ‘ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್’ ಸಂಸ್ಥೆಯ ಯೆಮೆನ್ ನಿರ್ದೇಶಕ ಲೂ ಕಾರ್ಮಾಕ್ ಮಾತನಾಡಿ, “ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆಗಳನ್ನು ನಡೆಸುವುದು ಕಷ್ಟಕರವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಚಿಕಿತ್ಸೆ ಸಿಗದೆ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುವ ಭೀತಿಯಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
