ದುಬೈ: ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ಮಣಿಸಿ 8ನೇ ಬಾರಿ ಚಾಂಪಿಯನ್ ಆದ ಭಾರತ ಮಹಿಳಾ ಕ್ರಿಕೆಟ್ ತಂಡ – ಗಣ್ಯರ ಅಭಿನಂದನೆ!

ದುಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದಿಸಿದ್ದಾರೆ.ತಮ್ಮ ಎಕ್ಸ್ ಖಾತೆಯಲ್ಲಿ ಭಾರತ ಮಹಿಳಾ ತಂಡವನ್ನು ಅಭಿನಂದಿಸಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಏಷ್ಯಾಕಪ್ ಗೆಲುವು ಭಾರತೀಯ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣ. ಏಷ್ಯಾಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಅವರ ಆತ್ಮವಿಶ್ವಾಸ, ಸ್ಥಿರತೆ ಮತ್ತು ಉತ್ತಮ ಮನೋಭಾವವು ಪಂದ್ಯಾವಳಿಯಾದ್ಯಂತ ಪ್ರದರ್ಶನಗೊಂಡಿತು. ಈ ತಂಡದ ಗೆಲುವು ದೇಶದ ಲಕ್ಷಾಂತರ ಯುವಕರನ್ನು ಆಡಲು ಮತ್ತು ಮಿಂಚಲು ಪ್ರೇರೇಪಿಸುತ್ತದೆ ಎಂದು ಆಶಿಸುತ್ತೇವೆ” ಎಂದು ತಿಳಿಸಿದ್ದಾರೆ.
“ಮಹಿಳಾ ಟಿ20 ಏಷ್ಯಾಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾದ ಎಲ್ಲಾ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪೂರ್ತಿ ಟೂರ್ನಮೆಂಟ್‌ನಾದ್ಯಂತ ತಂಡವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, ಆಡಿದ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಪ್ರಶಸ್ತಿ ಗೆಲ್ಲುವ ಮೂಲಕ ನಮ್ಮ ಯುವಜನರಿಗೆ, ಅದರಲ್ಲೂ ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳಿಗೆ ದೊಡ್ಡ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಮಹಿಳಾ ಪಡೆ ಭವಿಷ್ಯದಲ್ಲಿಯೂ ಯಶಸ್ಸು ಮತ್ತು ಶ್ರೇಷ್ಠತೆಯ ಇನ್ನೂ ಅನೇಕ ಸ್ಫೂರ್ತಿದಾಯಕ ಅಧ್ಯಾಯಗಳನ್ನು ಬರೆಯಲಿದ್ದಾರೆ ಎಂಬ ವಿಶ್ವಾಸ ನನಗಿದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪೋಸ್ಟ್ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 183 ರನ್ ಕಲೆಹಾಕಿತು. ಬಳಿಕ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 111 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಈ ಮೂಲಕ ಭಾರತ ಮಹಿಳಾ ತಂಡ 8 ನೇ ಬಾರಿಗೆ ಏಷ್ಯಾಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು
