ಅಲಹಾಬಾದ್ ಹೈಕೋರ್ಟ್ ತೀರ್ಪು ಸ್ವಾಗತಿಸಿದ ‘ದ ಸಫ್ರಾನ್ ಫ್ರಂಟ್’: ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಸ್ತು ಅಗತ್ಯ!

ಹೊಸದಿಲ್ಲಿ: ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಸಾಕಷ್ಟು ದಾಖಲೆ ಅಥವಾ ಪುರಾವೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಜೆಜೆ ಮುನೀರ್ ಮತ್ತು ನ್ಯಾಯಮೂರ್ತಿ ಇಂದ್ರಜೀತ್ ಶುಕ್ಲಾ ಅವರ ಪೀಠವು, ವಸ್ತ್ರ ಸಂಹಿತೆಯು ಏಕರೂಪ, ತಾರತಮ್ಯರಹಿತ, ಶಿಸ್ತು ಕಾಯ್ದುಕೊಳ್ಳುವ ಮತ್ತು ಸಾಂಸ್ಥಿಕ ಗುರುತನ್ನು ಕಾಪಾಡುವ ಉದ್ದೇಶ ಹೊಂದಿದ್ದರೆ ನಿಗದಿತ ಡ್ರೆಸ್ ಕೋಡ್ ಅನ್ನು ಮಾರ್ಪಡಿಸಲು ವಿದ್ಯಾರ್ಥಿ ಒತ್ತಾಯಿಸುವಂತಿಲ್ಲ ಎಂದು ಹೇಳಿದೆ.

ಮುಖ್ಯವಾಗಿ, ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ 2022ರ ಪೂರ್ಣಪೀಠದ ತೀರ್ಪಿನಿಂದ ಭಿನ್ನವಾದ ಅಭಿಪ್ರಾಯವನ್ನು ತಾಳಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಯಾಗ್ರಾಜ್ನ ಅತ್ತರ್ ಸುಯಿಯಾದ ಟ್ಯಾಗೋರ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಸುಕೈನಾ ರಿಝಿ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಅದೇ ಶಾಲೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆಯಲು ಬಯಸಿದ್ದರು. ತಮ್ಮ ತಾಯಿಯ ಮೂಲಕ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಶಾಲಾ ಆಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.
ನಾನು 6ನೇ ತರಗತಿಯಿಂದ 10ನೇ ತರಗತವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಆ ಅವಧಿಯುದ್ದಕ್ಕೂ ಯಾವುದೇ ಆಕ್ಷೇಪವಿಲ್ಲದೆ ಹಿಜಾಬ್ ಧರಿಸಿದ್ದೆ. ಆದರೆ, ಇದೀಗ ತಾನು ಹಿಜಾಬ್ ಧರಿಸುವ ಕಾರಣಕ್ಕೆ 11ನೇ ತರಗತಿಗೆ ಪ್ರವೇಶ ನೀಡಲು ಶಾಲಾ ಆಡಳಿತ ನಿರಾಕರಿಸುತ್ತಿದೆ ಎಂದು ಆಕೆ ಆರೋಪಿಸಿದ್ದಾಳೆ.
ಹಿಜಾಬ್ ಧರಿಸುವುದು ತನ್ನ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ವಿದ್ಯಾರ್ಥಿನಿ ವಾದಿಸಿದ್ದಾಳೆ. ಅದನ್ನು ತನ್ನ ಉಡುಪಿನ ಭಾಗವಾಗಿ ಧರಿಸುವುದನ್ನು ತಡೆಯುವುದು, ಸಂವಿಧಾನದ 14ನೇ ವಿಧಿ ಮತ್ತು 19(1)(a) ವಿಧಿಯಡಿ ಖಾತರಿಪಡಿಸಿರುವ ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿದ್ಯಾರ್ಥಿನಿ ವಾದಿಸಿದ್ದಾಳೆ.