174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್‌ಗೆ ಇಸ್ರೇಲ್ ಶೌರ್ಯ ಪ್ರಶಸ್ತಿ!

ಜೆರುಸಲೇಂ: ಫ್ಲೈದುಬೈ (Flydubai) ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smit Machchhar) ಅವರ ಸಾಹಸಕ್ಕೆ ಇಸ್ರೇಲ್ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿದೆ.ಇಸ್ರೇಲ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಶೌರ್ಯ ಪ್ರಶಸ್ತಿ ಪ್ರದಾನಕ್ಕೆ ಇಸ್ರೇಲ್ ನಿರ್ಧಾರ ಕೈಗೊಂಡಿದೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ‘ಇಸ್ರೇಲಿ ಶೌರ್ಯ’ ಪ್ರಶಸ್ತಿ (Presidential Award For Heroism) ಘೋಷಣೆ ಮಾಡಿದ್ದಾರೆ.

‘ಫ್ಲೈದುಬೈ’ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ತಮ್ಮ ಸಹ-ಪೈಲಟ್ ನಡೆಸಿದ ದಾಳಿಯನ್ನು ಎದುರಿಸಿ, 174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಪ್ರಾಣವನ್ನು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಉಳಿಸಿದ್ದರು.ಕಾಕ್‌ಪಿಟ್‌ನಲ್ಲಿದ್ದಾಗ, ಓಮನ್ ಪ್ರಜೆ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ ಎಂಬಾತ ಫ್ಲೈದುಬೈ ವಿಮಾನ ಪತನಕ್ಕೆ ಯತ್ನಿಸಿದ್ದ. ಈತ ಕೊಡಲಿಯಿಂದ (ಕ್ರಾಶ್ ಆಕ್ಸ್) ಹಲ್ಲೆ ನಡೆಸಿದ ಪರಿಣಾಮವಾಗಿ ಸ್ಮಿತ್ ಮಚ್ಚಾರ್ ಗಂಭೀರವಾಗಿ ಗಾಯಗೊಂಡರು. ತೀವ್ರವಾಗಿ ಗಾಯಗೊಂಡು ವಿಪರೀತ ರಕ್ತಸ್ರಾವವಾಗುತ್ತಿದ್ದರೂ, ಭಾರತೀಯ ಪೈಲಟ್ ಕಾಕ್‌ಪಿಟ್‌ನ ಬಾಗಿಲನ್ನು ತೆರೆದರು. ಅವರ ಈ ಕ್ರಮದಿಂದಾಗಿ ಇಸ್ರೇಲಿ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ, ಹಲ್ಲೆ ನಡೆಸಿದ ವ್ಯಕ್ತಿಯನ್ನು ಹತೋಟಿಗೆ ತರಲು ಸಾಧ್ಯವಾಯಿತು.