ಕೇರಳ: ಆಟವಾಡುತ್ತಾ ರೈಲ್ವೆ ಹಳಿಯತ್ತ ತೆರಳಿದ ಒಂದೂವರೆ ವರ್ಷದ ಕಂದಮ್ಮ; ರೈಲು ಡಿಕ್ಕಿಯಾಗಿ ದಾರುಣ ಸಾ*ವು!

ಆಲಪ್ಪುಳ (ಕೇರಳ): ಮನೆಯಿಂದ ಅಕಸ್ಮಾತ್ತಾಗಿ ರೈಲ್ವೆ ಹಳಿಯ ಕಡೆಗೆ ನಡೆದುಕೊಂಡು ಹೋದ ಒಂದೂವರೆ ವರ್ಷದ ಕಂದಮ್ಮನಿಗೆ ರೈಲು ಡಿಕ್ಕಿ ಹೊಡೆದು ಮಗು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಆಘಾತಕಾರಿ ಘಟನೆ ಮಂಗಳವಾರ ಸಂಜೆ ಕೇರಳದ ಆಲಪ್ಪುಳ ಜಿಲ್ಲೆಯ ಅಂಬಲಪ್ಪುಳದಲ್ಲಿ ನಡೆದಿದೆ. ಅಂಬಲಪ್ಪುಳದ ವಲಂಜವಾಜಿ ನಿವಾಸಿಗಳಾದ ವಿನೀತ್ ಮತ್ತು ಸೂರ್ಯ ಬಾಬು ದಂಪತಿಯ ಏಕೈಕ ಪುತ್ರ ಧೃಣವ್ (1.5 ವರ್ಷ) ಮೃತಪಟ್ಟ ದುರ್ದೈವಿ.

ಸಂಜೆ 6 ಗಂಟೆ ಸುಮಾರಿಗೆ ಮಗು ವಲಂಜವಾಜಿಯಲ್ಲಿರುವ ಅಜ್ಜಿಯ ಮನೆಯಿಂದ ಸುಮಾರು 30 ಮೀಟರ್ ದೂರದಲ್ಲಿದ್ದ ರೈಲ್ವೆ ಹಳಿಯ ಕಡೆಗೆ ಅಕಸ್ಮಾತ್ತಾಗಿ ನಡೆದುಕೊಂಡು ಹೋಗಿತ್ತು. ಈ ವೇಳೆ ವೇಗವಾಗಿ ಬಂದ ರೈಲು ಮಗುವಿಗೆ ಡಿಕ್ಕಿ ಹೊಡೆದಿದೆ.
ದಂಪತಿಗಳು ಕೆಲಸಕ್ಕೆ ಹೋಗುವಾಗ ಮಗುವನ್ನು ಸೂರ್ಯ ಅವರ ತಾಯಿ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ತಾಯಿ ಸೂರ್ಯ ಖಾಸಗಿ ಆಸ್ಪತ್ರೆಯಲ್ಲಿ ನೌಕರರಾಗಿದ್ದು, ತಂದೆ ವಿನೀತ್ ದಿನಗೂಲಿ ಕಾರ್ಮಿಕರಾಗಿದ್ದಾರೆ. ಘಟನೆ ನಡೆದ ಸಮಯದಲ್ಲಿ ಮಗುವಿನ ಅಜ್ಜ ಕೆಲಸದ ನಿಮಿತ್ತ ಹೊರಹೋಗಿದ್ದು, ಅಜ್ಜಿ ಮಾತ್ರ ಮನೆಯಲ್ಲಿದ್ದರು. ಅಜ್ಜಿಯ ಕಣ್ಣು ತಪ್ಪಿಸಿ ಮಗು ರೈಲ್ವೆ ಹಳಿಗೆ ತೆರಳಿದೆ ಎನ್ನಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಜಾಗರೂಕರಾದ ಲೋಕೋ ಪೈಲಟ್ ತಕ್ಷಣವೇ ರೈಲನ್ನು ನಿಲ್ಲಿಸಿದ್ದು, ಮಗುವಿನ ಮೃತದೇಹವನ್ನು ಹಳಿಯಿಂದ ಹೊರತೆಗೆಯಲಾಯಿತು. ಮೃತದೇಹವನ್ನು ಪ್ರಸ್ತುತ ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ದಂಪತಿಯ ಏಕೈಕ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.