“ಟೆಲಿಗ್ರಾಮ್ಗೆ ಕೇಂದ್ರದ ಬಿಸಿ: ಅಕ್ರಮ ಚಲನಚಿತ್ರ-ಒಟಿಟಿ ವಿಷಯಗಳ ಪ್ರಸಾರಕ್ಕೆ ಬ್ರೇಕ್; ಸ್ವಯಂಪ್ರೇರಿತ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ!

ಹೊಸದಿಲ್ಲಿ: ಪೈರೇಟೆಡ್ ಚಲನಚಿತ್ರಗಳು, ಒಟಿಟಿ (OTT) ವೇದಿಕೆಗಳ ವಿಷಯಗಳು ಹಾಗೂ ಇತರ ಆಡಿಯೊ-ವೀಡಿಯೋ ಅಕ್ರಮ ಪ್ರಸಾರವನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಮೆಸೇಜಿಂಗ್ ವೇದಿಕೆ ಟೆಲಿಗ್ರಾಮ್ಗೆ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐ&ಬಿ) ಶನಿವಾರ ಹೊರಡಿಸಿದ ನೋಟಿಸ್ನಲ್ಲಿ ಪೈರೇಟೆಡ್ ಚಲನಚಿತ್ರಗಳು ಮತ್ತು ಹಕ್ಕುಸ್ವಾಮ್ಯ ಉಲ್ಲಂಘಿಸುವ ವಿಷಯಗಳನ್ನು ಪತ್ತೆಹಚ್ಚುವುದು, ಅವುಗಳ ಪ್ರವೇಶವನ್ನು ನಿರ್ಬಂಧಿಸುವುದು ಹಾಗೂ ತೆಗೆದುಹಾಕುವ ವ್ಯವಸ್ಥೆಯನ್ನು ಬಲಪಡಿಸುವಂತೆ ಟೆಲಿಗ್ರಾಮ್ಗೆ ನಿರ್ದೇಶನ ನೀಡಿದೆ.

ಪೈರಸಿ ನಿಯಂತ್ರಿಸಿ, ಚಲನಚಿತ್ರೋದ್ಯಮ, ಒಟಿಟಿ ಸಂಸ್ಥೆಗಳು, ನಿರ್ಮಾಪಕರು ಮತ್ತು ವಿತರಕರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.
ಪೈರೇಟೆಡ್ ವಿಷಯಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿರುವ ಚಾನೆಲ್ ಗಳು, ಗುಂಪುಗಳು, ಬಾಟ್ ಗಳು, ಖಾತೆಗಳು ಮತ್ತು ಅವುಗಳ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಟೆಲಿಗ್ರಾಮ್ ಗೆ ಸೂಚಿಸಲಾಗಿದೆ. ಅಲ್ಲದೆ, ಪೈರೇಟೆಡ್ ವಿಷಯವನ್ನು ತಡೆಯಲು ಮತ್ತು ತೆಗೆದುಹಾಕಲು ಇದುವರೆಗೆ ಕೈಗೊಂಡಿರುವ ಕ್ರಮಗಳ ವರದಿಯನ್ನು 15 ದಿನಗಳೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಈ ಹಿಂದೆ ಸರಕಾರವು ಪೈರೇಟೆಡ್ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ 3,000ಕ್ಕೂ ಹೆಚ್ಚು ಟೆಲಿಗ್ರಾಮ್ ಚಾನೆಲ್ಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಟೆಲಿಗ್ರಾಮ್ ತನ್ನ ಕಾನೂನುಬದ್ಧ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದು ಸಚಿವಾಲಯ ನೆನಪಿಸಿದೆ.
ಪ್ರತಿ ಪೈರಸಿ ಚಾನೆಲ್ ಅನ್ನು ಸರಕಾರ ಗುರುತಿಸಿ ಸೂಚಿಸುವವರೆಗೆ ಟೆಲಿಗ್ರಾಮ್ ಕಾಯಲು ಸಾಧ್ಯವಿಲ್ಲ. ಪೈರೇಟೆಡ್ ವಿಷಯಗಳನ್ನು ಪತ್ತೆಹಚ್ಚಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುವುದು ವೇದಿಕೆಯ ಜವಾಬ್ದಾರಿಯಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಹಕ್ಕುಸ್ವಾಮ್ಯ ಉಲ್ಲಂಘನೆಯು ಕೇವಲ ನಾಗರಿಕ ಉಲ್ಲಂಘನೆಯಲ್ಲ; ಹಕ್ಕುಸ್ವಾಮ್ಯ ಕಾಯ್ದೆ-1957 ಮತ್ತು ಸಿನಿಮಾಟೋಗ್ರಾಫ್ ಕಾಯ್ದೆ-1952ರ ಅಡಿಯಲ್ಲಿ ಅದು ಕ್ರಿಮಿನಲ್ ಅಪರಾಧವೂ ಆಗಿದೆ ಎಂದು ಸಚಿವಾಲಯ ಒತ್ತಿ ಹೇಳಿದೆ.ಇತ್ತೀಚೆಗೆ ನೀಟ್-ಯುಜಿ ಮರುಪರೀಕ್ಷೆಗೆ ಮುನ್ನ ಸಂಭವನೀಯ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರಕಾರವು ಟೆಲಿಗ್ರಾಮ್ಗೆ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ರದ್ದಾಗಿದ್ದ ನೀಟ್-ಯುಜಿ ಪರೀಕ್ಷೆಯ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ.
ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ, ನೀಟ್-ಯುಜಿ ಮರುಪರೀಕ್ಷೆಗೆ ಮುನ್ನ ಆರು ದಿನಗಳ ಕಾಲ ಟೆಲಿಗ್ರಾಮ್ ಅನ್ನು ನಿರ್ಬಂಧಿಸುವ ಸರಕಾರದ ಕ್ರಮವನ್ನು ದಿಲ್ಲಿ ಹೈಕೋರ್ಟ್ ಎತ್ತಿಹಿಡಿದಿತ್ತು.