ವಿಂಬಲ್ಡನ್‌ನಲ್ಲಿ ವಿನೂತನ ಪ್ರತಿಭಟನೆ: ಪಿನ್ ಧರಿಸಲು ನಿರಾಕರಿಸಿದ ಆಯೋಜಕರಿಗೆ ಕಲ್ಲಂಗಡಿ ಚಿಹ್ನೆಯ ಮೂಲಕ ಟಕ್ಕರ್ ಕೊಟ್ಟ ಟೆನಿಸ್ ತಾರೆ!

ಲಂಡನ್: ಫೆಲೆಸ್ತೀನ್ ಬೆಂಬಲದ ಪಿನ್ ಧರಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ತುರ್ಕಿಯ ಟೆನಿಸ್ ಆಟಗಾರ್ತಿ ಜೆಯಪ್ ಸೋನ್ನೆಜ್ ಅವರು ವಿಂಬಲ್ಡನ್ ಚಾಂಪಿಯನ್‌ಷಿಪ್ ನಲ್ಲಿ ತಮ್ಮ ರಾಕೆಟ್ ಗೆ ಕಲ್ಲಂಗಡಿ ಆಕಾರದ ಶಾಕ್ ಅಬ್ಬಾರ್ಬರ್ ಅಳವಡಿಸಿಕೊಂಡು ಆಡಿ ಗಮನ ಸೆಳೆದರು.
ವಿಶ್ವ ಶ್ರೇಯಾಂಕದಲ್ಲಿ 51ನೇ ಸ್ಥಾನದಲ್ಲಿರುವ ಸೋನ್ನೆಜ್ ಅವರು ಗುರುವಾರ ನಡೆದ ಪಂದ್ಯದಲ್ಲಿ ಈ ಶಾಕ್ ಅಬ್ಬಾರ್ಬರ್ ಬಳಸಿದ್ದರು. ಫೆಲೆಸ್ತೀನ್ ಪರ ಪಿನ್ ಧರಿಸುವುದನ್ನು ಪಂದ್ಯಾವಳಿ ಆಯೋಜಕರು ನಿಷೇಧಿಸಿದ್ದರಿಂದ ತಾವು ಈ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ತುರ್ಕಿಯೆ ಸರಕಾರಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೋನ್ನೆಜ್, ‘ನಾನು ಫೆಲೆಸ್ತೀನ್ ಪರ ಪಿನ್ ಧರಿಸುತ್ತಿದ್ದೆ. ಆದರೆ, ಅದನ್ನು ಇನ್ನು ಮುಂದೆ ಧರಿಸಲು ಅವಕಾಶ ನೀಡುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಉಕ್ರೇನ್ ಧ್ವಜಕ್ಕೆ ಅವಕಾಶ ನೀಡುತ್ತಿರುವಾಗ ಫೆಲೆಸ್ತೀನ್ ಧ್ವಜಕ್ಕೆ ಅವಕಾಶ ನೀಡದಿರುವ ಬಗ್ಗೆ ನಾವು ಪ್ರಶ್ನಿಸಿದ್ದೇವೆ. ಆದರೆ, ಅದನ್ನು ಅನುಮತಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹೀಗಾಗಿ, ಪಿನ್ ಬದಲಿಗೆ ನನ್ನ ರಾಕೆಟ್ ನಲ್ಲಿ ಕಲ್ಲಂಗಡಿ ಚಿಹ್ನೆಯ ಶಾಕ್ ಅಬ್ಬಾರ್ಬರ್ ಬಳಸಿದ್ದೇನೆ’ ಎಂದು ಹೇಳಿದ್ದಾರೆ.
ಕಲ್ಲಂಗಡಿ ಹಣ್ಣು ಫೆಲೆಸ್ತೀನ್ ಜನರೊಂದಿಗೆ ಒಗ್ಗಟ್ಟಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರ ಕೆಂಪು, ಬಿಳಿ, ಕಪ್ಪು ಮತ್ತು ಹಸಿರು ಬಣ್ಣಗಳು ಫೆಲೆಸ್ತೀನ್ ಧ್ವಜದ ಬಣ್ಣಗಳಿಗೆ ಹೊಂದಿಕೆಯಾಗುತ್ತವೆ.
ಈ ಕುರಿತು ಪ್ರತಿಕ್ರಿಯಿಸಿದ ವಿಂಬಲ್ಡನ್ ಪಂದ್ಯಾವಳಿಯ ನಿರ್ದೇಶಕ ಜೇಮೀ ಬೇಕರ್, ಆಟಗಾರರು ಕೋರ್ಟ್‌ನಲ್ಲಿ ರಾಜಕೀಯ ಸಂದೇಶಗಳನ್ನು ಪ್ರದರ್ಶಿಸುವುದನ್ನು ಸಾಮಾನ್ಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಗ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲೂ ಇದೇ ನಿಯಮ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
‘ಉಕ್ರೇನ್ ಪರಿಸ್ಥಿತಿ ವಿಭಿನ್ನವಾಗಿತ್ತು. ಬ್ರಿಟನ್ ಸರಕಾರದ ಮಾರ್ಗದರ್ಶನ ಮತ್ತು ಅಂತರರಾಷ್ಟ್ರೀಯ ಪ್ರತಿಕ್ರಿಯೆಗಳ ಆಧಾರದ ಮೇಲೆ ನಾವು ಕ್ರಮ ಕೈಗೊಂಡಿದ್ದೆವು. ಉಕ್ರೇನಿಯನ್ ಆಟಗಾರರಿಗೆ ಬೆಂಬಲ ಸೂಚಿಸಲಾಗಿತ್ತು. ಆದ್ದರಿಂದ ಅದು ವಿಶೇಷ ಸಂದರ್ಭವಾಗಿತ್ತು’ ಎಂದು ಬೇಕರ್ ಹೇಳಿದ್ದಾರೆ.
2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದ ಬಳಿಕ ವಿಂಬಲ್ಡನ್ ಆಯೋಜಕರು ರಷ್ಯಾ ಮತ್ತು ಬೆಲಾರಸ್ ಆಟಗಾರರನ್ನು ಚಾಂಪಿಯನ್‌ಷಿಪ್‌ನಿಂದ ನಿಷೇಧಿಸಿದ್ದರು.
ಕಲ್ಲಂಗಡಿ ಚಿಹ್ನೆಯ ಕುರಿತು ಪ್ರತಿಕ್ರಿಯಿಸಿದ ಬೇಕರ್, ‘ಈ ಚಿಹ್ನೆಯು ನಮ್ಮ ನಿಯಮಗಳ ಪ್ರಕಾರ ನಿಷೇಧಿಸಬೇಕಾದ ಅಥವಾ ಪಂದ್ಯಕ್ಕೆ ಅಡ್ಡಿಪಡಿಸುವ ಮಟ್ಟವನ್ನು ತಲುಪಿಲ್ಲ ಎಂದು ನಾವು ಭಾವಿಸುತ್ತೇವೆ’ ಎಂದು ತಿಳಿಸಿದ್ದಾರೆ.