ತಿರುವನಂತಪುರಂ: ಕೇರಳದಲ್ಲಿ ಮುಂದುವರಿದ ಮಳೆಯ ಆರ್ಭಟ – ಪ್ರವಾಹ ಹಾಗೂ ಭೂಕುಸಿತಕ್ಕೆ 9 ಮಂದಿ ಬಲಿ!

ತಿರುವನಂತಪುರಂ: ಕೇರಳದ ಮೂರು ಜಿಲ್ಲೆಗಳಲ್ಲಿ ರವಿವಾರದಿಂದ ಸಂಭವಿಸಿದ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಪೂಕೊಟ್ಟುಂಪಾಡಂನಲ್ಲಿ ರವಿವಾರ ಕೊಟ್ಟಪುಳ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಆರು ಮಂದಿ ಕೊಚ್ಚಿಕೊಂಡು ಹೋಗಿದ್ದರು. ಇವರಲ್ಲಿ ಐದು ಮಂದಿಯ ಮೃತದೇಹಗಳನ್ನು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ಡಿಆಎಫ್ ಹೊರ ತೆಗೆದಿದೆ. ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಟೀಕೋಯ್ ಬಳಿಯ ವೆಲತ್ತುಸ್ಸೇರಿಯಲ್ಲಿ ಭೂಕುಸಿತ ಸಂಭವಿಸಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ತಮಿಳುನಾಡಿನ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಸ್ನೇಹಿತ ಗಾಯಗೊಂಡಿದ್ದಾರೆ. ಮೃತರನ್ನು ಚೆನ್ನೈ ಮೂಲದ ಸಂಗೀತಾ ಅರುಣ್ ಲಾಲ್ (35) ಎಂದು ಗುರುತಿಸಲಾಗಿದೆ.
ಇಡುಕ್ಕಿ ಜಿಲ್ಲೆಯ ಕೊಟ್ಟಕ್ಕಂಬೂರ್ನಲ್ಲಿ ರವಿವಾರ ಸಂಜೆ ಮಳೆಯಿಂದ ರಕ್ಷಣೆ ಪಡೆಯಲು ಆಶ್ರಯ ಪಡೆದಿದ್ದ ತಂಗುದಾಣದ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಮೃತರ ಕುಟುಂಬಗಳಿಗೆ ಪರಿಹಾರ ಧನ ಹಾಗೂ ಗಾಯಗೊಂಡವರಿಗೆ ಆರ್ಥಿಕ ನೆರವನ್ನು ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ.
