ಶ್ವೇತಭವನದ ಬಳಿ ಶಸ್ತ್ರಾಸ್ತ್ರಗಳೊಂದಿಗೆ ಅನುಮಾನಾಸ್ಪದ ವ್ಯಕ್ತಿ ಸೆರೆ: ಟ್ರಂಪ್ ಹ*ತ್ಯೆಗೆ ಸಂಚು ಆರೋಪ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಹತ್ಯೆಗೆ ಸಂಚು ಆರೋಪ ಹಿನ್ನೆಲೆ ಶ್ವೇತಭವನದ ಸಮೀಪ ಶಸ್ತ್ರಾಸ್ತ್ರಗಳೊಂದಿಗೆ ವೆನೆಜುವೆಲಾ ಪ್ರಜೆಯನ್ನು (Venezuelan Citizen) ಸೀಕ್ರೆಟ್ ಸರ್ವಿಸ್ (Secret Service) ಅಧಿಕಾರಿಗಳು ಬಂಧಿಸಿದ್ದಾರೆ.

ಗುರುವಾರ ತಡರಾತ್ರಿ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಶ್ವೇತಭವನದ ಸುತ್ತಮುತ್ತ ಗಸ್ತು ತಿರುಗುತ್ತಿದ್ದರು. ಈ ವೇಳೆ ಕಾನ್ಸ್ಟಿಟ್ಯೂಷನ್ ಅವೆನ್ಯೂ ಬಳಿ ನೀಲಿ ಬಣ್ಣದ ಫೋರ್ಡ್ ಎಫ್-150 ಪಿಕಪ್ ಟ್ರಕ್ ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿದ್ದಾರೆ. ತಕ್ಷಣ ವಾಹನದ ಬಳಿ ತೆರಳಿದ ಅಧಿಕಾರಿ, ಒಳಗಿದ್ದ ವ್ಯಕ್ತಿಯ ಸುರಕ್ಷತೆ ಹಾಗೂ ಆತನ ಬಳಿ ಶಸ್ತ್ರಾಸ್ತ್ರಗಳಿವೆಯೇ ಎಂದು ವಿಚಾರಿಸಿದ್ದಾರೆ.ಅನುಮಾನಾಸ್ಪದವಾಗಿ ನಿಂತಿದ್ದ ವಾಹನದಲ್ಲಿ ಮೂರು ಬಂದೂಕುಗಳು ಹಾಗೂ ಅಪಾರ ಪ್ರಮಾಣದ ಗುಂಡುಗಳು ಪತ್ತೆಯಾಗಿದೆ. ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ತಲೆಯೊಳಗಿನ ಧ್ವನಿಗಳು ಸೂಚನೆ ನೀಡಿದ್ದವು ಎಂದು ಆರೋಪಿ ಹೇಳಿಕೊಂಡಿದ್ದಾನೆ. ಅಧಿಕಾರಿಗಳು ಬಂದೂಕುಗಳ ಬಗ್ಗೆ ಪ್ರಶ್ನಿಸಿದಾಗ ವ್ಯಕ್ತಿ ತಲೆಯಾಡಿಸಿ ಒಪ್ಪಿಕೊಂಡಿದ್ದಾನೆ. ಬಳಿಕ ಬೆರಳಿನಿಂದ ಬಂದೂಕಿನ ಸನ್ನೆಯನ್ನೂ ಮಾಡಿದ್ದಾನೆ. ನಂತರ ವಾಹನದಿಂದ ಕೆಳಗಿಳಿದ ಆತನನ್ನು ಗೂಗಲ್ ಟ್ರಾನ್ಸ್ಲೇಟ್ ಸಹಾಯದಿಂದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬಂಧಿತನನ್ನು 26 ವರ್ಷದ ವೆನೆಜುವೆಲಾ ಪ್ರಜೆ ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಕ್ರಿನೋಸ್ ಎಂದು ಗುರುತಿಸಲಾಗಿದೆ. ತನ್ನನ್ನು ಯಾರೋ ಬಂದೂಕಿನಿಂದ ಕೊಲ್ಲಲು ಪ್ರಯತ್ನಿಸಿದ್ದರು. ಅವರಿಂದಲೇ ಈ ಬಂದೂಕನ್ನು ಕಸಿದುಕೊಂಡಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಅಲ್ಲದೆ, ವಾಹನದಲ್ಲಿದ್ದ ಕಂದು ಬಣ್ಣದ ಬ್ಯಾಗ್ನತ್ತ ಅಧಿಕಾರಿಗಳ ಗಮನ ಸೆಳೆದಿದ್ದಾನೆ.
ಕದ್ದ ವಾಹನದಲ್ಲಿ ಮೂರು ಬಂದೂಕು ಪತ್ತೆ:
ವಾಹನವನ್ನು ಪರಿಶೀಲಿಸಿದಾಗ ಎಂಎಸಿ-10 ಮೆಷಿನ್ ಪಿಸ್ತೂಲ್, ಗ್ಲಾಕ್ 43ಎಕ್ಸ್ ಪಿಸ್ತೂಲ್ ಹಾಗೂ ಎಆರ್-15 ರೈಫಲ್ ಪತ್ತೆಯಾಗಿವೆ. ಇದರೊಂದಿಗೆ ಹತ್ತಾರು ಸುತ್ತುಗಳ ಗುಂಡುಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಈ ಪಿಕಪ್ ಟ್ರಕ್ ದಕ್ಷಿಣ ಕೆರೊಲಿನಾದಲ್ಲಿ ಕಳ್ಳತನವಾಗಿರುವ ವಾಹನ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಟ್ರಂಪ್ ಹತ್ಯೆಗೆ ಧ್ವನಿಗಳಿಂದ ಸೂಚನೆ:
ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ತನ್ನ ತಲೆಯೊಳಗಿನ ಧ್ವನಿಗಳು ಸೂಚನೆ ನೀಡಿದ್ದವು ಎಂದು ಆರೋಪಿ ಹೇಳಿಕೊಂಡಿದ್ದಾನೆ. ಅಲ್ಲದೆ ಈ ಸೂಚನೆಯಂತೆ ವಾಷಿಂಗ್ಟನ್ ಡಿಸಿಗೆ ತೆರಳುವಂತೆ ಧ್ವನಿಗಳು ತಿಳಿಸಿದ್ದವು ಎಂದಿದ್ದಾನೆ. ಆದರೆ, ಧ್ವನಿಗಳ ಕುರಿತ ಈ ಹೇಳಿಕೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಪರಾಧ ದೂರು ದಾಖಲೆಯ ಅಫಿಡವಿಟ್ನಲ್ಲಿ ಉಲ್ಲೇಖವಾಗಿಲ್ಲ.
ಆರೋಪಿ ವಿರುದ್ಧ ಹಲವು ಪ್ರಕರಣ ದಾಖಲು:
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೀಕ್ರೆಟ್ ಸರ್ವಿಸ್ ನಿರ್ದೇಶಕ ಸೀನ್ ಕರನ್, ಶ್ವೇತಭವನದ ಸುತ್ತಮುತ್ತ ಶಸ್ತ್ರಸಜ್ಜಿತ ವ್ಯಕ್ತಿಗಳ ಓಡಾಟ ಹೆಚ್ಚುತ್ತಿರುವುದು ಭದ್ರತಾ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಸನ್ನಿವೇಶಗಳನ್ನು ಎದುರಿಸಲು ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದಿದ್ದಾರೆ.
ಅನುಮತಿಯಿಲ್ಲದೆ ವಾಹನ ಬಳಕೆ, ಕದ್ದ ಆಸ್ತಿಯನ್ನು ಸ್ವೀಕರಿಸುವುದು, ಪರವಾನಗಿ ಇಲ್ಲದೆ ಪಿಸ್ತೂಲ್ ಹಾಗೂ ರೈಫಲ್ ಹೊಂದಿರುವುದು ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿದೆ.
ಶುಕ್ರವಾರ ಆರೋಪಿಯನ್ನು ಡಿಸಿ ಸುಪೀರಿಯರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನು ನಿರಾಕರಿಸಿ ಬಂಧನದಲ್ಲಿರಿಸಲಾಗಿದೆ. ಡಿಹೆಚ್ಎಸ್ ಪ್ರಕಾರ, ಆರೋಪಿ ವೆನೆಜುವೆಲಾದಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬಂದಿದ್ದು, 2024ರ ಮಾರ್ಚ್ನಲ್ಲಿ ಟೆಕ್ಸಾಸ್ ಮೂಲಕ ದೇಶ ಪ್ರವೇಶಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಆತನ ವಿರುದ್ಧ ವಲಸೆ ಬಂಧನ ಆದೇಶವನ್ನೂ ದಾಖಲಿಸಿದೆ.