ಸುರತ್ಕಲ್: ಮೊಬೈಲ್ ಮಾತಿಗೆ ವಿರೋಧ; ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣ ಅರೆಸ್ಟ್!

ಮಂಗಳೂರು : ರಾತ್ರಿ ಮನೆಯಲ್ಲಿ ಮಲಗಿದ್ದ ಸ್ವಂತ ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಅಣ್ಣನೇ ಭೀಕರವಾಗಿ ಕೊಲೆ ಮಾಡಿರುವ ಕರುಣಾಜನಕ ಹಾಗೂ ಆಘಾತಕಾರಿ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮಠದ ಬಳಿ ರವಿವಾರ ತಡರಾತ್ರಿ ನಡೆದಿದೆ.

ಕೊಲೆಯಾದ ದುರ್ದೈವಿಯನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ನಿವಾಸಿ, ಪ್ರಸ್ತುತ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಆತನ ಸ್ವಂತ ಅಣ್ಣ ಸೋಮನಾಥ್ (21) ಎಂಬಾತನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತಗ್ಯಾಳ ಗ್ರಾಮದ ಮೂಲದವರಾದ ಶಿವಲೀಲಾ ಮತ್ತು ಅವರ ಮಕ್ಕಳಾದ ಸೋಮನಾಥ ಹಾಗೂ ಮಲ್ಲಿಕಾರ್ಜುನ ಕಳೆದ 5 ವರ್ಷಗಳಿಂದ ಚೊಕ್ಕಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡುತ್ತಿದ್ದರು. ಜುಲೈ 19ರ ರಾತ್ರಿ 11.00 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನ ಯಾವುದೋ ಹುಡುಗಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಅಣ್ಣ ಸೋಮನಾಥ ವಿರೋಧ ವ್ಯಕ್ತಪಡಿಸಿದ್ದಾನೆ. ಈ ವೇಳೆ ತಮ್ಮ ಮಲ್ಲಿಕಾರ್ಜುನ ಉಡಾಫೆಯಿಂದ ಅಣ್ಣನಿಗೆ ಬೈದಿದ್ದಾನೆ. ಇದರಿಂದ ತೀವ್ರ ಕೋಪಗೊಂಡ ಸೋಮನಾಥ, ತಮ್ಮ ಮಲ್ಲಿಕಾರ್ಜುನ ನಿದ್ದೆಗೆ ಜಾರಿದ ಬಳಿಕ ಮನೆಯಲ್ಲಿದ್ದ ಕೊಡಲಿಯಿಂದ ಆತನ ತಲೆ ಹಾಗೂ ಮುಖಕ್ಕೆ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕಾರ್ಯಾಚರಣೆ ನಡೆಸಿದ ಸುರತ್ಕಲ್ ಪೊಲೀಸರು ಕೃಷ್ಣಾಪುರ ಮಠ ರಸ್ತೆಯ ಬಳಿಯ ಪೊದೆಯಲ್ಲಿ ಅವಿತುಕೊಂಡಿದ್ದ ಆರೋಪಿ ಸೋಮನಾಥನನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಸೋಮನಾಥ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.