ಸೌದಿ ಅರೇಬಿಯಾದಲ್ಲಿ ಸರಣಿ ಡ್ರೋನ್ ದಾಳಿ: ಮೂವರು ಸಾ*ವು, ಹಲವರಿಗೆ ಗಾಯ!

ರಿಯಾದ್: ಸೌದಿ ಅರೇಬಿಯಾದ ಸೌದಿ ಅರಾಮ್ಕೊ ಕಂಪನಿಯ (Aramco Oil Field) ಶೈಬಾ ತೈಲ ಸ್ಥಾವರವನ್ನು ಗುರಿಯಾಗಿಸಿಕೊಂಡು ಬುಧವಾರ ಡ್ರೋನ್ ದಾಳಿ ನಡೆದಿದೆ.
ಸೌದಿ ಸೇನೆ ಡ್ರೋನ್ ತಡೆದರೂ, ಅದರ ಅವಶೇಷಗಳು ಬಿದ್ದ ಪರಿಣಾಮ ಬೆಂಕಿ ಹೊತ್ತಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಫಿಲಿಪೈನ್ಸ್ ಮತ್ತು ನೇಪಾಳದ ಪ್ರಜೆಗಳು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಭಾರತೀಯ ಮತ್ತು ಪಾಕಿಸ್ತಾನದ ತಲಾ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್‌ನ ಅವಶೇಷಗಳು ತೈಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆದಾರರ ವಾಹನದ ಮೇಲೆ ಬಿದ್ದಿದ್ದು, ಬೆಂಕಿ ಕಾಣಿಸಿಕೊಂಡಿದೆ. ಆದರೆ, ಈ ಘಟನೆಯಿಂದ ತೈಲ ಸ್ಥಾವರದ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸೌದಿ ಇಂಧನ ಸಚಿವಾಲಯ ತಿಳಿಸಿದೆ.
ದಮ್ಮಾಮ್ ವಿಮಾನ ನಿಲ್ದಾಣದ ಮೇಲೂ ದಾಳಿ; ಒಬ್ಬ ಸಾವು
ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಗಳ ಆತಂಕ ಹೆಚ್ಚಾಗಿದೆ. ದಮ್ಮಾಮ್‌ನಲ್ಲಿರುವ ಕಿಂಗ್ ಫಹದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಬುಧವಾರ ದಾಳಿ ನಡೆದಿದ್ದು, ಒಬ್ಬ ಮೃತಪಟ್ಟಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಆಸ್ತಿಪಾಸ್ತಿಗೂ ಹಾನಿಯಾಗಿದೆ ಎಂದು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಹಾನಿಯ ಪ್ರಮಾಣದ ಕುರಿತು ಪರಿಶೀಲನೆ ನಡೆಯುತ್ತಿದೆ.ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಅನಿವಾರ್ಯವಲ್ಲದ ಸಿಬ್ಬಂದಿ ಮತ್ತು ಅವರ ಕುಟುಂಬದವರು ದೇಶವನ್ನು ತೊರೆಯುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಆದೇಶಿಸಿದೆ.
ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೋಟ್, ಸಿಬ್ಬಂದಿ ಮತ್ತು ಅವರ ಕುಟುಂಬದವರ ಸುರಕ್ಷತೆ ಅಮೆರಿಕದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಭದ್ರತಾ ಆತಂಕಕ್ಕೆ ಕಾರಣವಾಗಿದೆ ಎಂದು ಅಮೆರಿಕ ತಿಳಿಸಿದೆ.ಹೌತಿಗಳ ದಾಳಿಯಿಂದ ಹೆಚ್ಚಿದ ಆತಂಕ
ಯೆಮೆನ್ ಮೂಲದ ಹೌತಿ ಬಂಡುಕೋರರೇ ಶೈಬಾ ತೈಲ ಸ್ಥಾವರದ ಮೇಲಿನ ಡ್ರೋನ್ ದಾಳಿ ನಡೆಸಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ, ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳು ದೇಶದ ಭದ್ರತೆ ಹಾಗೂ ವಿಮಾನಯಾನ ವ್ಯವಸ್ಥೆಯ ಬಗ್ಗೆ ಆತಂಕ ಮೂಡಿಸಿವೆ.
ತೈಲ ಸ್ಥಾವರದ ಕಾರ್ಯಾಚರಣೆ ಮುಂದುವರಿದಿದ್ದರೂ, ದಮ್ಮಾಮ್ ವಿಮಾನ ನಿಲ್ದಾಣದ ಮೇಲಿನ ದಾಳಿ ಮತ್ತು ಅಮೆರಿಕದ ಸಿಬ್ಬಂದಿಗೆ ನೀಡಿರುವ ನಿರ್ಗಮನ ಆದೇಶವು ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತೋರಿಸುತ್ತಿದೆ.
