ಭಾರತೀಯ ನೌಕಾಪಡೆಗೆ 8 ಹೊಸ ಯುದ್ಧನೌಕೆಗಳು: ₹40 ಸಾವಿರ ಕೋಟಿ ಯೋಜನೆಗೆ ಕೇಂದ್ರದ ಗ್ರೀನ್ ಸಿಗ್ನಲ್!

ನವದೆಹಲಿ: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ನೌಕಾಪಡೆಗಾಗಿ 8 ಅತ್ಯಾಧುನಿಕ ಮುಂದಿನ ತಲೆಮಾರಿನ ಯುದ್ಧನೌಕೆಗಳನ್ನ (ನೆಕ್ಸ್ಟ್ ಜನರೇಷನ್ ಕಾರ್ವೆಟ್ಗಳು) ನಿರ್ಮಿಸುವ 40 ಸಾವಿರ ಕೋಟಿಗೂ ಅಧಿಕ ಮೊತ್ತದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಭದ್ರತಾ ಸಂಪುಟ ಸಮಿತಿ ಅನುಮೋದನೆ ನೀಡಿದೆ.

ಅಕ್ಟೋಬರ್ 28ರಂದು ನಡೆದ ಸಮಿತಿ ಸಭೆಯಲ್ಲಿ ಈ ಮಹತ್ವದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಯುದ್ಧನೌಕೆಗಳ ನಿರ್ಮಾಣದ ಗುತ್ತಿಗೆಯನ್ನ ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (GRSE) ಹಾಗೂ ಗೋವಾ ಶಿಪ್ಯಾರ್ಡ್ ಲಿಮಿಟೆಡ್ (GSL) ಸಂಸ್ಥೆಗಳಿಗೆ ನೀಡಲಾಗುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಎರಡೂ ಸಂಸ್ಥೆಗಳೊಂದಿಗೆ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.ಸುಧಾರಿತ ತಂತ್ರಜ್ಞಾನ, ಸ್ಟೆಲ್ತ್ ವಿನ್ಯಾಸ
ಹೊಸದಾಗಿ ನಿರ್ಮಾಣವಾಗಲಿರುವ 8 ಯುದ್ಧನೌಕೆಗಳು ತಲಾ ಸುಮಾರು 2,000 ಟನ್ ತೂಕ ಹೊಂದಿರಲಿವೆ. ಗಂಟೆಗೆ ಸುಮಾರು 56 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ನೌಕೆಗಳನ್ನು ಭಾರತೀಯ ನೌಕಾಪಡೆಯೇ ರೂಪಿಸಿರುವ ನೂತನ ವಿನ್ಯಾಸದ ಆಧಾರದಲ್ಲಿ ನಿರ್ಮಿಸಲಾಗುತ್ತದೆ. ಶತ್ರುಗಳ ರೇಡಾರ್ ಕಣ್ಣಿಗೆ ಸುಲಭವಾಗಿ ಸಿಗದಂತೆ ಸ್ಟೆಲ್ತ್ ತಂತ್ರಜ್ಞಾನವನ್ನ ಅಳವಡಿಸಲಾಗುತ್ತದೆ. ಈ ಯುದ್ಧನೌಕೆಗಳು ಬಹುಮುಖ ಕಾರ್ಯಾಚರಣೆಗಳಿಗೆ ಬಳಕೆಯಾಗಲಿದ್ದು, ಶತ್ರುಗಳ ಯುದ್ಧನೌಕೆಗಳ ವಿರುದ್ಧ ದಾಳಿ, ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ನಾಶಪಡಿಸುವುದು ಹಾಗೂ ವೈಮಾನಿಕ ದಾಳಿಗಳನ್ನ ಎದುರಿಸುವ ಸಾಮರ್ಥ್ಯ ಹೊಂದಿರಲಿವೆ. ಕರಾವಳಿ ಭದ್ರತೆ, ಸಮುದ್ರ ಗಸ್ತು, ಕಣ್ಗಾವಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿಯೂ ಇವು ಪ್ರಮುಖ ಪಾತ್ರ ವಹಿಸಲಿವೆ.70% ಕ್ಕೂ ಅಧಿಕ ಸ್ವದೇಶಿ ಉತ್ಪನ್ನಗಳ ಬಳಕೆ
ಈ ಯೋಜನೆಯಲ್ಲಿ ಶೇ.70ಕ್ಕೂ ಅಧಿಕ ಸ್ವದೇಶಿ ಬಿಡಿಭಾಗಗಳು ಮತ್ತು ತಂತ್ರಜ್ಞಾನವನ್ನು ಬಳಸಲು ಉದ್ದೇಶಿಸಲಾಗಿದೆ. ಇದರಿಂದ ದೇಶೀಯ ರಕ್ಷಣಾ ಉತ್ಪಾದನಾ ವಲಯಕ್ಕೆ ಉತ್ತೇಜನ ದೊರೆಯುವುದರ ಜತೆಗೆ ಆತ್ಮನಿರ್ಭರ ಭಾರತ ಅಭಿಯಾನಕ್ಕೂ ಬಲ ಸಿಗಲಿದೆ. ಜಿಆರ್ಎಸ್ಇ ಮತ್ತು ಗೋವಾ ಶಿಪ್ಯಾರ್ಡ್ ಸಂಸ್ಥೆಗಳಿಗೆ ದೀರ್ಘಾವಧಿಯ ಉದ್ಯೋಗಾವಕಾಶ ಹಾಗೂ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಯೋಜನೆಯಡಿ ಮೊದಲ ಯುದ್ಧನೌಕೆಯ ನಿರ್ಮಾಣ ಕಾರ್ಯ ಮುಂದಿನ ಒಂದು ವರ್ಷದೊಳಗೆ ಆರಂಭವಾಗುವ ಸಾಧ್ಯತೆಯಿದೆ. 2030ರ ವೇಳೆಗೆ ಮೊದಲ ಯುದ್ಧನೌಕೆಯನ್ನು ನೌಕಾಪಡೆಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಉಳಿದ ಯುದ್ಧನೌಕೆಗಳ ಹಸ್ತಾಂತರ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.