ರಾಜಮಂಡ್ರಿ: ಕುಡಿದು ಕಾರು ಚಲಾಯಿಸಿ ಪಿಜಿ ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಯುವಕರು; ಹೈದರಾಬಾದ್ ಆಸ್ಪತ್ರೆಯಲ್ಲಿ ದುರ್ಮರ*ಣ!

ರಾಜಮಂಡ್ರಿ/ಹೈದರಾಬಾದ್ : ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕರು ಚಲಾಯಿಸುತ್ತಿದ್ದ ಕಾರು ಸ್ಕೂಟರ್ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ 28 ವರ್ಷದ ಸ್ನಾತಕೋತ್ತರ ವೈದ್ಯಕೀಯ (PG Medical) ವಿದ್ಯಾರ್ಥಿನಿ ಡಾ. ಪ್ರಿಯಾಂಕಾ ಭಾನುವಾರ ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ರಾಜಮಂಡ್ರಿಯ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಡಾ. ಪ್ರಿಯಾಂಕಾ ಅವರು ಆಗಸ್ಟ್ 3 ರಂದು ನಗರದ ಮಾಲ್ ಬಳಿ ತಮ್ಮ ಸ್ನೇಹಿತೆಯೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರು ಮಾಲ್ನ ಭದ್ರತಾ ಸಿಬ್ಬಂದಿ ಜೊತೆ ಜಗಳವಾಡಿ ತಮ್ಮ ಟಾಟಾ ನೆಕ್ಸಾನ್ ಎಸ್ಯುವಿ ಕಾರಿನಲ್ಲಿ ವೇಗವಾಗಿ ಹೊರಟಿದ್ದಾರೆ. ಈ ವೇಳೆ ಮುಂಭಾಗದಲ್ಲಿ ತೆರಳುತ್ತಿದ್ದ ಪ್ರಿಯಾಂಕಾ ಅವರ ಸ್ಕೂಟರ್ಗೆ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದು ಅವರ ಮೇಲೆಯೇ ಕಾರು ಹರಿಸಿದ್ದಾರೆ.
ಅಪಘಾತದಲ್ಲಿ ಪ್ರಿಯಾಂಕಾ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿತ್ತು (Brain Dead). ಅವರ ಸ್ನೇಹಿತೆಯೂ ಗಾಯಗೊಂಡಿದ್ದರು. ಆರಂಭದಲ್ಲಿ ರಾಜಮಂಡ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದ ಪ್ರಿಯಾಂಕಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ಗೆ ಸ್ಥಳಾಂತರಿಸಲಾಗಿತ್ತು. ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಸ್ಥಿತಿ ಕ್ಷೀಣಿಸಿ ಭಾನುವಾರ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. “ನಮ್ಮ ಇಡೀ ದೊಡ್ಡ ಕುಟುಂಬದಲ್ಲೇ ಆಕೆ ಮೊದಲ ವೈದ್ಯೆಯಾಗಿದ್ದಳು” ಎಂದು ಮೃತರ ತಂದೆ ಕಣ್ಣೀರಿಟ್ಟಿದ್ದಾರೆ.
ಅಪಘಾತದ ಬಳಿಕ ಪರಾರಿಯಾಗಿದ್ದ ಸುರವರಪು ದುಷ್ಯಂತ್ ಮತ್ತು ಆಂಡ್ರ್ಯೂ ಜೋಸೆಫ್ ಎಡ್ವರ್ಡ್ಸ್ ಎಂಬ ಇಬ್ಬರು ಆರೋಪಿಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ನಿರ್ಲಕ್ಷ್ಯದ ಚಾಲನೆ (BNS Sec 338) ಕೇಸ್ ದಾಖಲಿಸಿದ್ದ ಪೊಲೀಸರು, ತನಿಖೆಯ ಬಳಿಕ ಕೊಲೆಗೆ ಸಮನಾಗದ ಅಪರಾಧಿಕ ನರಹತ್ಯೆಯತ್ನ (BNS Sec 308) ಪ್ರಕರಣವನ್ನೂ ಸೇರಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿನಿಯ ದಾರುಣ ಸಾವಿಗೆ ವೈದ್ಯಕೀಯ ರಂಗ ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.