ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ; ಕದ್ದ ಕಾರಿಗೆ ಬಣ್ಣ ಬಳಿದು ಆಂಬುಲೆನ್ಸ್ ಆಗಿ ಪರಿವರ್ತಿಸಿದ್ದ ನಾಲ್ವರು ಆರೋಪಿಗಳ ಬಂಧನ!

ಪುತ್ತೂರು : ಅಂತರ್ ರಾಜ್ಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ (25), ಮೊಹಮ್ಮದ್ ಆಸೀಕ್ (25), ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡಿನ ಕರೂರು ನಿವಾಸಿ ಶಕ್ತಿವೇಲು ಜಿ (24) ಬಂಧಿತ ಆರೋಪಿಗಳು. ಬಂಧಿತರಿಂದ ಕಳ್ಳತನ ಮಾಡಿದ್ದ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಸುದೀರ್ಘ ವಿಚಾರಣೆಯ ವೇಳೆ ಆರೋಪಿಗಳು ಆಘಾತಕಾರಿ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಆರೋಪಿಗಳು ವಾಹನವನ್ನು ಕಳವು ಮಾಡಿ, ಬಳಿಕ ಅದನ್ನು ಕೇರಳಕ್ಕೆ ತೆಗೆದುಕೊಂಡು ಹೋಗಿದ್ದರು. ನಂತರ ಅಲ್ಲಿಂದ ತಮಿಳುನಾಡಿಗೆ ಸಾಗಿಸಿ ಮಾರಾಟ ಮಾಡಿದ್ದರು. ಅಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ಕದ್ದ ಕಾರಿಗೆ ಹೊಸ ರೂಪ ನೀಡಿ ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಕೇರಳದ ಬದಿಯಡ್ಕ ಮತ್ತು ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.