ಪಣಂಬೂರು ಕಡಲಲ್ಲಿ ದುರಂತ: ಹುಲಿವೇಷ ತರಬೇತಿಗೆ ಬಂದಿದ್ದ ಬಾಲಕ ಸಮುದ್ರದ ಅಲೆಗೆ ಬಲಿ!

ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ 14 ವರ್ಷದ ಬಾಲಕನೊಬ್ಬ ಪಣಂಬೂರು ಬಳಿಯ ಕೂರಿಕಟ್ಟ ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಸಿಲುಕಿ ಮುಳುಗಿ ನಾಪತ್ತೆಯಾದ ದುರಂತ ಘಟನೆ ಸಂಭವಿಸಿದೆ.
ಬೆಳ್ತಂಗಡಿ ತಾಲ್ಲೂಕಿನ ಕಸಬಾ ಗ್ರಾಮದ ರೆಂಕೆದ ಗುತ್ತು ಮೂಲದ ಶ್ರೇಯಸ್ ಎಸ್. ಕುಂಬಾರ (14) ಕಾಣೆಯಾದ ಬಾಲಕ.
ಸೆಪ್ಟೆಂಬರ್ 4ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಶ್ರೇಯಸ್ ತನ್ನ 4 ಜನ ಅಪ್ರಾಪ್ತ ಸ್ನೇಹಿತರೊಂದಿಗೆ ದಸರಾ ಹುಲಿವೇಷ ಅಭ್ಯಾಸಕ್ಕಾಗಿ ಮಂಗಳೂರಿಗೆ ಬಂದಿದ್ದನು. ತರಬೇತಿ ಮುಗಿದ ನಂತರ ಎಲ್ಲರೂ ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದಾರೆ. ಸಂಜೆ 4:30 ರಿಂದ 5:00 ಗಂಟೆಯ ಸುಮಾರಿಗೆ ಪಣಂಬೂರಿನ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿ, ಸಂಜೆ 6:00 ಗಂಟೆಗೆ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಶ್ರೇಯಸ್ ಸಮುದ್ರದ ಬಲವಾದ ಅಲೆಗಳ ರಭಸಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾನೆ.
ಘಟನೆಯಿಂದ ಆತಂಕಗೊಂಡ ಆತನ ಅಪ್ರಾಪ್ತ ಸ್ನೇಹಿತರು ಭಯದಿಂದ ಶ್ರೇಯಸ್‌ನ ಮನೆಯವರಿಗೆ ತಕ್ಷಣ ಮಾಹಿತಿ ನೀಡಿರಲಿಲ್ಲ. ಬಳಿಕ ಮರುದಿನ ಬೆಳಿಗ್ಗೆ ಬಾಲಕನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಕಾಣೆಯಾದ ಬಾಲಕನ ತಂದೆ ಸೇಷಪ್ಪ ಅವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.
ಪತ್ತೆಗಾಗಿ ತೀವ್ರ ಶೋಧ:
ಕಾಣೆಯಾದ ಬಾಲಕನ ಪತ್ತೆಗಾಗಿ ಕೋಸ್ಟ್ ಗಾರ್ಡ್ (ಭಾರತೀಯ ಕರಾವಳಿ ಕಾವಲು ಪಡೆ), ಕರಾವಳಿ ಕಾವಲು ಪಡೆ (ಸಿಎಸ್‌ಪಿ) ಹಾಗೂ ಸಮುದ್ರ ತೀರದ ವ್ಯಾಪ್ತಿ ಹೊಂದಿರುವ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದೆ. ಪ್ರಸ್ತುತ ಲೈಫ್‌ಗಾರ್ಡ್ ಸಿಬ್ಬಂದಿ, ಮುಳುಗು ತಜ್ಞರು ಮತ್ತು ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
