ಮಣಿಪಾಲ: ಎಂಐಟಿ ಕ್ಯಾಂಪಸ್‌ನಲ್ಲಿ ಇ-ಮೊಬಿಲಿಟಿ ಕಂಪನಿಗೆ 12 ಲಕ್ಷ ರೂ. ವಂಚನೆ – ಆರು ಮಂದಿ ಚಾಲಕರು ಅರೆಸ್ಟ್!

ಮಣಿಪಾಲ : ಎಂಐಟಿ (MIT) ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬ್ಯಾಟರಿ ಚಾಲಿತ ವಾಹನ ಸೇವೆ ಒದಗಿಸುತ್ತಿದ್ದ ‘ಇಂಡಿಯಾಂಟಾ ಇ ಮೊಬಿಲಿಟಿ’ ಕಂಪನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಸಿದ್ದಮೂರ್ತಿ ಜಿ. (29), ಆತ್ರಾಡಿಯ ಶಿವರಾಜ್ ನಾಯ್ಕ (30), ಚಿತ್ರದುರ್ಗದ ಸುದೀಪ್ (30), ಮಂಜೇಶ್ವರದ ಜಿತೇಶ ಕಾಂಚನ್ (29), ಬೆಳಗಾವಿಯ ಮುತ್ತಣ್ಣ ಅಢೀನವರ (32) ಹಾಗೂ ಬೆಳ್ತಂಗಡಿ ನಾವೂರಿನ ಎಂ.ಬಿ. ಅವಿನಾಶ್ (24) ಬಂಧಿತ ಆರೋಪಿಗಳು. ಕಂಪನಿಯಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದ ಈ ಆರೋಪಿಗಳು ಏಪ್ರಿಲ್ 1 ರಿಂದ ಪ್ರಯಾಣಿಕರಿಂದ ಸಂಗ್ರಹವಾಗಬೇಕಿದ್ದ ಶುಲ್ಕವನ್ನು ಸಂಸ್ಥೆಯ ಅಧಿಕೃತ ಕ್ಯೂಆರ್ (QR) ಕೋಡ್‌ಗೆ ಪಡೆಯದೆ, ತಮ್ಮ ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್‌ಗಳನ್ನು ಬಳಸಿ ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹವಾದ ಒಟ್ಟು ₹12,00,000 ಹಣವನ್ನು ಆರೋಪಿ ಮುತ್ತಣ್ಣ ಅದಿನವರ್ ಅವರ ಪತ್ನಿ ಐಶ್ವರ್ಯ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಕಂಪನಿಗೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದರು.ಈ ಕುರಿತು ಕಂಪನಿ ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಮಣಿಪಾಲ ಠಾಣೆ ಪೊಲೀಸರು, ಅಕ್ಟೋಬರ್ 2 ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಂಚನೆಯ ಜಾಲ ಹಾಗೂ ಹಣದ ಚಲಾವಣೆಯ ಕುರಿತು ಹೆಚ್ಚಿನ ತನಿಖೆ ನಡೆಸಲು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
