ಹೊಸದಿಲ್ಲಿ: ಪ್ರತಿಭಟನೆ ವೇಳೆ ಯುವಕನಿಗೆ ಗಾಯಗೊಳಿಸಿದ ಪೆಲೆಟ್‌ಗಳನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ; ಎಫ್‌ಐಆರ್‌ಗೆ ಆಗ್ರಹಿಸಿ ಧರಣಿ!

ಹೊಸದಿಲ್ಲಿ: ಜುಲೈ 20ರಂದು ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾರೆ ಎನ್ನಲಾದ 19 ವರ್ಷದ ಸಾಹಿಲ್ ಲೋಚಬ್ ಅವರ ದೇಹದಿಂದ ಹೊರತೆಗೆದ ಪೆಲೆಟ್‌ಗಳನ್ನು ಒಳಗೊಂಡ ಪ್ಲಾಸ್ಟಿಕ್ ಬಾಟಲಿಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಪ್ರದರ್ಶಿಸಿದರು.
ಕಾಕ್ರೋಚ್ ಜನತಾ ಪಕ್ಷ (CJP) ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಲೋಚಬ್ ಗಾಯಗೊಂಡಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಕಣ್ಣಿನಿಂದ ಹಲವು ಲೋಹದ ಪೆಲೆಟ್‌ಗಳನ್ನು ವೈದ್ಯರು ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ.ರಾಹುಲ್ ಗಾಂಧಿ ಮತ್ತು ಲೋಚಬ್ ಶುಕ್ರವಾರ ಬೆಳಿಗ್ಗೆ ಸಂಸತ್ತು ಬೀದಿ ಪೊಲೀಸ್ ಠಾಣೆಗೆ ತೆರಳಿ, ಪ್ರತಿಭಟನೆಯ ವೇಳೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಕುರಿತು FIR ದಾಖಲಿಸುವಂತೆ ಒತ್ತಾಯಿಸಿದರು.
ಆದರೆ, FIR ದಾಖಲಿಸಲು ಪೊಲೀಸರು ನಿರಾಕರಿಸಿದರು. ಇದರಿಂದ ಗಾಂಧಿ ಪೊಲೀಸ್ ಠಾಣೆಯ ಹೊರಗೆ ಧರಣಿ ನಡೆಸಿದರು. FIR ದಾಖಲಿಸುವವರೆಗೆ ಅಲ್ಲಿಂದ ತೆರಳುವುದಿಲ್ಲ ಎಂದು ಹೇಳಿದರು. ಹಿರಿಯ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಜೈರಾಮ್ ರಮೇಶ್ ಕೂಡ ಧರಣಿಯಲ್ಲಿ ಭಾಗವಹಿಸಿದರು.
ಧರಣಿ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಅವರ ದೇಹದೊಳಗೆ 200ಕ್ಕೂ ಹೆಚ್ಚು ಮತ್ತು ಕಣ್ಣಿನಲ್ಲಿ ಮೂರು ಶೆಲ್ಗಳಿವೆ ಎಂದು AIIMS ವರದಿ ಸ್ಪಷ್ಟವಾಗಿ ಹೇಳುತ್ತದೆ. ಅವರು ಆ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಹೃದಯದ ಬಳಿ ತೆಗೆಯಲು ಸಾಧ್ಯವಾಗದ ಶೆಲ್‌ಗಳಿವೆ” ಎಂದು ಹೇಳಿದರು.ದಿಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿಲ್ಲ ಎಂದು ಹೇಳಿರುವುದನ್ನು ರಾಹುಲ್ ಗಾಂಧಿ ಪ್ರಶ್ನಿಸಿದರು. “ದಿಲ್ಲಿ ಪೊಲೀಸರು ಗುಂಡು ಹಾರಿಸಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಒಂದೇ ಪ್ರಶ್ನೆ ಇದೆ: ಯಾರೋ ಅದನ್ನು ಮಾಡಿರಬೇಕು” ಎಂದು ಅವರು ಹೇಳಿದರು.
ಪ್ರತಿಭಟನೆಯ ಕೆಲವೇ ದಿನಗಳ ಬಳಿಕ ರಾಹುಲ್ ಗಾಂಧಿ ಲೋಚಬ್ ಅವರ ದೇಹದ ಮೇಲಿನ ಗಾಯಗಳನ್ನು ಮಾಧ್ಯಮಗೋಷ್ಠಿಯಲ್ಲಿ ತೋರಿಸಿದ್ದರು. ಆದರೆ, ಪೆಲೆಟ್‌ಗಳನ್ನು ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಪ್ರದರ್ಶಿಸಿದ್ದಾರೆ.
