ಮಂಗಳೂರು: ಆಟೋ ಪ್ರಯಾಣಿಕರಿಗೆ ಶಾಕ್; ನವೆಂಬರ್ 1ರಿಂದ ಪರಿಷ್ಕೃತ ಆಟೋ ದರ ಜಾರಿ!

ಮಂಗಳೂರು : ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಆಗಸ್ಟ್ 28 ರಂದು ಹೊರಡಿಸಿದ ಆದೇಶದಲ್ಲಿ ಈ ಹಿಂದೆ ಅಂದರೆ 2022 ರ ನವೆಂಬರ್ 23 ರಲ್ಲಿ ಹೊರಡಿಸಲಾದ ಪರಿಷ್ಕೃತ ಅಧಿಸೂಚನೆಯಲ್ಲಿ ನಂತರದ ಪ್ರತಿ ಕಿ.ಮೀ ನಿಗದಿಪಡಿಸಿದ ರೂ.20 ನ್ನು ಪರಿಗಣಿಸದ ಕಾರಣ ಆಗಸ್ಟ್ 28 ರ ಆದೇಶವನ್ನು ಹಿಂಪಡೆದು ಪರಿಷ್ಕೃತಆದೇಶವನ್ನು ಹೊರಡಿಸಿದ್ದು, ಪರಿಷ್ಕೃತ ಆಟೋರಿಕ್ಷಾ ಪ್ರಯಾಣ ದರವು ನವೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.ಇತ್ತೀಚಿನ ದಿನಗಳಲ್ಲಿ ಸಿ.ಎನ್.ಜಿ, ಎಲ್.ಪಿ.ಜಿ ಮತ್ತು ಡೀಸೆಲ್ ಬೆಲೆಗಳು ಹಾಗೂ ವಾಹನದ ಬಿಡಿಭಾಗಗಳ ಬೆಲೆ ಏರಿಕೆಯಾಗಿರುತ್ತದೆ. ಇದರಿಂದ ಆಟೋ ಚಾಲಕರ ಖರ್ಚು ವೆಚ್ಚಗಳು ಕೂಡಾ ಹೆಚ್ಚಾಗಿರುತ್ತದೆ. ಆಟೋ ಚಾಲಕರ ಕ್ಷೇಮಾಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಗಿನಂತೆ ದರವನ್ನು ಪರಿಷ್ಕರಿಸಿ ಆದೇಶಿಸಿದೆ. ಪರಿಷ್ಕೃತ ದರಗಳು ನವೆಂಬರ್ 1 ರಿಂದ ಜಾರಿಗೆ ಬರಲಿದೆ.
ಕನಿಷ್ಠ ದರ ಮೊದಲ 1.5 ಕಿ.ಮೀ.- ರೂ.40 (ಗರಿಷ್ಠ 3 ಜನ ಪ್ರಯಾಣಿಕರು), ನಂತರದ ಪ್ರತಿ ಕಿಲೋಮೀಟರ್ ದರ- ರೂ.23 (ಗರಿಷ್ಠ 3 ಜನ ಪ್ರಯಾಣಿಕರು), ಕಾಯುವ ದರಗಳು -ಮೊದಲ 10 ನಿಮಿಷ ಉಚಿತ ನಂತರದ 15 ನಿಮಿಷದವರಗೆ ಅಥವಾ ಅದರ ಭಾಗಕ್ಕೆ ರೂ.5
ಪ್ರಯಾಣಿಕರ ಸರಕಿಗೆ (ಲಗೇಜ್)-ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆ ಇರಬೇಕು, ಮೊದಲ 20 ಕಿ.ಗ್ರಾಂ.ಗಳಿಗೆ ಉಚಿತ ನಂತರದ 20 ಕೆ.ಜಿ.ಗಳಿಗೆ ಅಥವಾ ಅದರ ಭಾಗಕ್ಕೆ ರೂ.5, ರಾತ್ರಿ ವೇಳೆ ದರ- ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ದರದ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾಗಳಲ್ಲಿಯೂ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು.
ಆಟೋರಿಕ್ಷಾ ಚಾಲಕ ಮಾಲಕರು ತಮ್ಮ ಆಟೋರಿಕ್ಷಾಗಳ ಪ್ಲಾಗ್ ಮೀಟರ್ನಲ್ಲಿ ಪರಿಷ್ಕರಿಸಿ ನಿಗದಿ ಪಡಿಸಿದ ದರವನ್ನು ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಕೊಂಡು ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.
ಇದಕ್ಕೆ ತಪ್ಪಿದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಿನಂತೆ ದಂಡ ವಿಧಿಸುವುದು/ ಪರವಾನಿಗೆ ಅಮಾನತ್ತು/ ರದ್ದತಿ ಕುರಿತು ಕ್ರಮ ಕೈಗೊಳ್ಳುವುದು ಹಾಗೂ ಇತರೇ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೆೋಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೂಚಿಸಿದೆ.
