ಮೈಸೂರಿನಲ್ಲಿ ದಸರಾ ಬಲೂನ್ ಮಾರುವ ಬಾಲಕಿ ಅತ್ಯಾಚಾರ, ಕೊಲೆ: ಕ್ರೂರಿ ಕಾರ್ತಿಕ್ಗೆ ಮರಣದಂಡನೆ!

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಕಳೆದ ವರ್ಷ ದಸರಾ ವೇಳೆ ಬಲೂನ್ ಮಾರುವ ಬಾಲಕಿ (Balloon Vendors) ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಕಾಮುಕ ಕಾರ್ತಿಕ್ಗೆ (ಅಪರಾಧಿ) ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.ಕಾರ್ತಿಕ್ ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆ ಮೈಸೂರು ಶೀಘ್ರಗತಿ ನ್ಯಾಯಾಲಯದ (Mysuru Fast Track Special Court) ನ್ಯಾಯಾಧೀಶರಾದ ಅನಿಲ್ ಪಿ ವಘಾಢೆ ಅವರು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.ಏನಿದು ಪ್ರಕರಣ?

ಕಳೆದ ವರ್ಷ ಮೈಸೂರು ದಸರಾ ಮಹೋತ್ಸವ ಸಮಯದಲ್ಲಿ ಈ ಹೀನಕೃತ್ಯ ನಡೆದಿತ್ತು. ದಸರಾ ಹಿನ್ನೆಲೆ ಕುಟುಂಬವೊಂದು ಗುಲ್ಬರ್ಗಾದಿಂದ (Kalaburagi) ಬಲೂನ್ ಮಾರಲು ಮೈಸೂರಿಗೆ (Mysuru) ಬಂದಿತ್ತು. ಆ ಕುಟುಂಬ ದಸರಾ ವಸ್ತುಪ್ರದರ್ಶನ ಬಳಿ ಟೆಂಟ್ನಲ್ಲಿ ವಾಸ್ತವ್ಯ ಹೂಡಿತ್ತು. ಕುಟುಂಬಸ್ಥರೆಲ್ಲರೂ ಮಲಗಿದ್ದಾಗ ಕಾಮುಕ ಕಾರ್ತಿಕ್ 9 ವರ್ಷದ ಬಾಲಕಿಯನ್ನ ಎಳೆದೊಯ್ದು ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆ ಮಾಡಿದ್ದ.
ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣವನ್ನ ಮೈಸೂರಿನ ಫಾಸ್ಟ್ಟ್ರ್ಯಾಕ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಅಪರಾಧ ಸಾಬೀತಾಗಿತ್ತು. ಇಂದು ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ.